ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ರಾಹುಲ್ ರತ್ನಂ ಪಾಂಡೆ, ಐಎಎಸ್ ಅವರು ಅಕ್ಟೋಬರ್ 29ರ ಗುರುವಾರ, ಪಾಲಿಕೆ ಅಧಿಕಾರಿಗಳೊಂದಿಗೆ ವಾರ್ಡ್ ಸಂಖ್ಯೆ 8ರ ಹೊಸಬೆಟ್ಟು–ಸುರತ್ಕಲ್ ಪ್ರದೇಶದಲ್ಲಿ 2ನೇ ‘ವಾಕ್ ವಿತ್ ಕಮಿಷನರ್’ ಕಾರ್ಯಕ್ರಮ ನಡೆಸಿದರು.
ಸುರತ್ಕಲ್ ಜಂಕ್ಷನ್ನಿಂದ ಆರಂಭಗೊಂಡ ನಡಿಗೆ ಸುರತ್ಕಲ್ ಮಾರುಕಟ್ಟೆ, ಮುಡಾ ಮಾರುಕಟ್ಟೆ, ತಾತ್ಕಾಲಿಕ ಮಾರುಕಟ್ಟೆ ವಲಯ, ಪ್ರಿಯದರ್ಶಿನಿ ಕಾಲನಿ, ಗೋವಿಂದ ದಾಸ್ ಕಾಲೇಜು ಮೂಲಕ ಸಾಗಿ ಕೊನೆಗೆ ಸುರತ್ಕಲ್ನ ಇಂದಿರಾ ಕ್ಯಾಂಟೀನ್ನಲ್ಲಿ ಮುಕ್ತಾಯಗೊಂಡಿತು.
ನಡಿಗೆಯ ಆರಂಭದಲ್ಲಿ ಸ್ಥಳೀಯರು ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದ ಮನವಿ ಪತ್ರಗಳನ್ನು ಆಯುಕ್ತರಿಗೆ ಸಲ್ಲಿಸಿದರು. ಮನವಿಗಳನ್ನು ಪರಿಶೀಲಿಸಿದ ಆಯುಕ್ತರು, ಸಮಸ್ಯೆಗಳನ್ನು ಪರಿಶೀಲಿಸಿ ಶೀಘ್ರ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಯುಜಿಡಿ ಕಾಮಗಾರಿಗೆ ₹25 ಕೋಟಿ ಮೀಸಲು
ಸುರತ್ಕಲ್ ಪ್ರದೇಶಗಳಲ್ಲಿ ಯುಜಿಡಿ ಕಾಮಗಾರಿ ಪ್ರಮುಖ ಸಮಸ್ಯೆಯಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಯುಕ್ತರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಯುಜಿಡಿ ಕಾಮಗಾರಿಗಾಗಿ ₹25 ಕೋಟಿ ಮೀಸಲಿಡಲಾಗಿದ್ದು, ಸಮಸ್ಯೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮುಡಾ ಮಾರುಕಟ್ಟೆ ವಿಳಂಬಕ್ಕೆ ಕಾರಣ ಕೇಳಿದ ಆಯುಕ್ತರು
ಮುಡಾ ಮಾರುಕಟ್ಟೆಗೆ ಭೇಟಿ ನೀಡಿದ ಆಯುಕ್ತರು, ಮಳಿಗೆಗಳ ಹಂಚಿಕೆ ಪ್ರಕ್ರಿಯೆ ಎರಡು ವರ್ಷಗಳ ಕಾಲ ವಿಳಂಬವಾಗಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಆಯುಕ್ತರು, ವಿಳಂಬಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ತಾಂತ್ರಿಕ ಅಂಶಗಳನ್ನು ಮುಡಾ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಪರಿಶೀಲಿಸುವಂತೆ ಸೂಚಿಸಿದರು.
ಸುರತ್ಕಲ್ ಮತ್ತು ಮುಡಾ ಮಾರುಕಟ್ಟೆಗಳನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಗೊಳಿಸಲು ಅಗತ್ಯವಿರುವ ನೀರು ಮತ್ತು ವಿದ್ಯುತ್ ಸಂಪರ್ಕಗಳ ಸ್ಥಿತಿಗತಿಯನ್ನೂ ಅವರು ಪರಿಶೀಲಿಸಿದರು.
ಮಾರುಕಟ್ಟೆಯ 64 ವ್ಯಾಪಾರಿಗಳೊಂದಿಗೆ ಮುಂದಿನ ವಾರ ಸಭೆ ನಡೆಸಿ, ನವೆಂಬರ್ 10ರೊಳಗೆ ಅವರಿಗೆ ನಿಗದಿಪಡಿಸಿರುವ ಮಾರುಕಟ್ಟೆ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಾರುಕಟ್ಟೆ ಬಳಿಯಿರುವ ಅನಧಿಕೃತ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಯನ್ನು ಮಹಾನಗರ ಪಾಲಿಕೆಯ ಸಭಾ ಕಾರ್ಯಸೂಚಿಯಲ್ಲಿ ಸೇರಿಸಿ, ಈ ಕುರಿತು ಪರಿಶೀಲನೆ ನಡೆಸುವಂತೆ ಟೌನ್ ವೆಂಡಿಂಗ್ ಕಮಿಟಿಗೆ ಶಿಫಾರಸು ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಂಬಂಧಪಟ್ಟವರಿಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಬೇಕು. ಆ ಬಳಿಕ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮುಲ್ಕಿ ಪುರಸಭೆಯ ಅಧಿಕಾರಿಗಳೊಂದಿಗೆ ನವೆಂಬರ್ 2ರಂದು ಸಭೆ
ಕುಡಿಯುವ ನೀರು ಕೊಳವೆ ಬಗ್ಗೆ ಸ್ಥಳೀಯರೊಬ್ಬರು ಆಯುಕ್ತರ ಗಮನಕ್ಕೆ ತಂದರು. ಪರಿಶೀಲನೆಯ ವೇಳೆ, ಈ ಕಾಮಗಾರಿಗಳು ಮುಲ್ಕಿ ಪುರಸಭೆಯ ವ್ಯಾಪ್ತಿಗೆ ಸಂಬಂಧಿಸಿರುವುದು ತಿಳಿದುಬಂತು. ಕಾಮಗಾರಿಗಳ ದುರಸ್ತಿ ಕೈಗೊಂಡು, ಅದರ ವೆಚ್ಚದ ಬಿಲ್ ಅನ್ನು ಮುಲ್ಕಿ ಪುರಸಭೆಗೆ ಸಲ್ಲಿಸುವಂತೆ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಈ ಕುರಿತು ಚರ್ಚಿಸಲು ನವೆಂಬರ್ 2ರಂದು ಮುಲ್ಕಿ ನಗರಸಭೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತೆಯೂ ನಿರ್ದೇಶನ ನೀಡಿದರು.
ಕಸ ಸಾಗಣೆ ವಾಹನಗಳ ನಿಲುಗಡೆ ಪ್ರದೇಶದಲ್ಲಿ ಸ್ವಚ್ಛತೆಗೆ ಸೂಚನೆ
ಎಂಆರ್ಪಿಎಲ್ ರಸ್ತೆಯಲ್ಲಿರುವ ಮಹಾನಗರ ಪಾಲಿಕೆಯ ಕಸ ಸಾಗಣೆ ವಾಹನಗಳ ನಿಲುಗಡೆ ಪ್ರದೇಶಕ್ಕೆ ಆಯುಕ್ತರು ಭೇಟಿ ನೀಡಿ ಪರಿಶೀಲಿಸಿದರು. ಈ ಪ್ರದೇಶದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ದೂರುಗಳು ಬಂದ ಹಿನ್ನೆಲೆಯಲ್ಲಿ, ಸಮಸ್ಯೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.
ಮದರಬೆಟ್ಟು ರಸ್ತೆಯ ಅಗಲೀಕರಣಕ್ಕೆ ಪ್ರಸ್ತಾವನೆ
ಮದರಬೆಟ್ಟುವಿಗೆ ಸಂಪರ್ಕ ಕಲ್ಪಿಸುವ ಸುಮಾರು 1,500 ಮೀಟರ್ ಉದ್ದದ ರಸ್ತೆಯನ್ನು ಆಯುಕ್ತರು ಪರಿಶೀಲಿಸಿದರು. ಎರಡು ದಿಕ್ಕುಗಳಲ್ಲಿ ಅಗಲವಾದ ಕಾಂಕ್ರೀಟ್ ರಸ್ತೆಗಳಿದ್ದು, ಮುಂದೆ ಅವು ಒಂದೇ ರಸ್ತೆಯಾಗಿ ಮೇಲ್ಸೇತುವೆಯ ಮೂಲಕ ಸಾಗುವ ವ್ಯವಸ್ಥೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ರೀತಿಯ ರಸ್ತೆ ವಿನ್ಯಾಸಕ್ಕೆ ಕಾರಣವೇನು ಎಂದು ಆಯುಕ್ತರು ಪ್ರಶ್ನಿಸಿದಾಗ, ಅದರ ಕೆಳಭಾಗದಲ್ಲಿ ಕೊಂಕಣ ರೈಲ್ವೆಗೆ ಸೇರಿದ ರೈಲು ಮಾರ್ಗವಿರುವುದಾಗಿ ಅಧಿಕಾರಿಗಳು ತಿಳಿಸಿದರು.
ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಕೊಂಕಣ ರೈಲ್ವೆಗೆ ಪ್ರಸ್ತಾವನೆ ಸಲ್ಲಿಸಲು ಪತ್ರ ಸಿದ್ಧಪಡಿಸುವಂತೆ ಹಾಗೂ ಈ ಕುರಿತು ಮುಂದಿನ ವಾರ ಎಂಆರ್ಪಿಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತೆ ಆಯುಕ್ತರು ಸೂಚಿಸಿದರು.
ಪ್ರಿಯದರ್ಶಿನಿ ಕಾಲನಿಯಲ್ಲಿ ಚರಂಡಿ ಸಮಸ್ಯೆ ಪರಿಶೀಲನೆ
ಪ್ರಿಯದರ್ಶಿನಿ ಕಾಲನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರೊಬ್ಬರು ಚರಂಡಿ ಸಮಸ್ಯೆಯನ್ನು ಆಯುಕ್ತರ ಗಮನಕ್ಕೆ ತಂದರು. ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಲ್ಲದೆ, ರಸ್ತೆಯ ಸಮೀಪ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ತಂತಿಗಳು ಹಾಗೂ ಸಂಪರ್ಕಗಳು ಅಪಾಯಕಾರಿಯಾಗಿ ಇರದಂತೆ ಖಚಿತಪಡಿಸಿಕೊಳ್ಳಲು ಮೆಸ್ಕಾಂ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ನಿರ್ದೇಶನ ನೀಡಿದರು. ವಿದ್ಯುತ್ ಅವಘಡಗಳನ್ನು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.
ಇಂದಿರಾ ಕ್ಯಾಂಟೀನ್ನಲ್ಲಿ ಆಹಾರದ ಗುಣಮಟ್ಟ, ನೈರ್ಮಲ್ಯ ಪರಿಶೀಲನೆ
ನಡಿಗೆಯ ಕೊನೆಯಲ್ಲಿ ಸುರತ್ಕಲ್ನ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿದ ಆಯುಕ್ತರು, ಅಧಿಕಾರಿಗಳೊಂದಿಗೆ ಆಹಾರವನ್ನು ಸವಿದು ಗುಣಮಟ್ಟ ಹಾಗೂ ನೈರ್ಮಲ್ಯವನ್ನು ಪರಿಶೀಲಿಸಿದರು. ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಕ್ಯಾಂಟೀನ್ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಹಾಗೂ ಅಗತ್ಯ ಸೌಲಭ್ಯಗಳೊಂದಿಗೆ ಸಮರ್ಪಕವಾಗಿ ಸೇವೆ ಒದಗಿಸುವ ಬಗ್ಗೆ ಖಾತ್ರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ನರೇಶ್ ಪಿ. ಶೆಣೈ, ನಗರ ಯೋಜನೆ, ಎಂಜಿನಿಯರಿಂಗ್, ಆರೋಗ್ಯ ಮತ್ತು ಕಂದಾಯ ವಿಭಾಗಗಳ ಅಧಿಕಾರಿಗಳು, ಮೇಲ್ವಿಚಾರಕರು ಹಾಗೂ ಸಮುದಾಯ ಸಂಚಾಲಕರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









