ಕಾಪು : ಪ್ರವಾಸಕ್ಕೆಂದು ಆಗಮಿಸಿ ಕಾಪು ಬೀಚ್ನಲ್ಲಿ ಸಮುದ್ರಕ್ಕಿಳಿದಿದ್ದ ದಾವಣಗೆರೆ ಮೂಲದ ಇಬ್ಬರು ಯುವಕರು ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿ ನೀರು ಪಾಲಾಗಿರುವ ದಾರುಣ ಘಟನೆ ಭಾನುವಾರ ಸಂಜೆ ಸಂಭವಿಸಿದೆ. ಸಮುದ್ರದಲ್ಲಿ ಕೊಚ್ಚಿಹೋದ 20 ಮತ್ತು 15 ವರ್ಷ ವಯಸ್ಸಿನ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ದಾವಣಗೆರೆ ಮೂಲದ ಕುಟುಂಬವೊಂದು ವಾರಾಂತ್ಯದ ವಿಹಾರಕ್ಕಾಗಿ ಕಾಪು ಕಡಲತೀರಕ್ಕೆ ಆಗಮಿಸಿತ್ತು. ಈ ತಂಡದಲ್ಲಿದ್ದ ಐವರು ಯುವಕರು ಸಂಜೆ ವೇಳೆ ನೀರಿನಲ್ಲಿ ಆಟವಾಡಲು ಸಮುದ್ರಕ್ಕಿಳಿದಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಅಪ್ಪಳಿಸಿದ ರಕ್ಕಸ ಅಲೆಗಳ ಅಬ್ಬರಕ್ಕೆ ಸಿಲುಕಿದ ಐವರೂ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎಂದು ತಿಳಿದುಬಂದಿದೆ.
ಯುವಕರು ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಹಾಗೂ ಜೀವರಕ್ಷಕ ತಂಡದವರು ತಕ್ಷಣವೇ ಕಾರ್ಯಾಚರಣೆ ನಡೆಸಿ ಐವರ ಪೈಕಿ ಮೂವರನ್ನು ದಡಕ್ಕೆ ತಂದು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಉಳಿದ ಇಬ್ಬರು ಯುವಕರು ಸಮುದ್ರದ ಆಳಕ್ಕೆ ಕೊಚ್ಚಿಹೋಗಿ ನಾಪತ್ತೆಯಾಗಿದ್ದಾರೆ. ರಕ್ಷಿಸಲ್ಪಟ್ಟ ಮೂವರು ಯುವಕರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತಕ್ಷಣವೇ ಉಚ್ಚಿಲದ ಎಸ್ಡಿಪಿಐ ಆಂಬ್ಯುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಮುದ್ರಕ್ಕಿಳಿದಿದ್ದ ಯುವಕರ ಪೈಕಿ ಒಬ್ಬರು ಉಡುಪಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಅವರನ್ನು ಭೇಟಿಯಾಗಲೆಂದೇ ದಾವಣಗೆರೆಯಿಂದ ಕುಟುಂಬ ಸದಸ್ಯರು ಆಗಮಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ಇಬ್ಬರು ಯುವಕರ ಪತ್ತೆಗಾಗಿ ಸಮುದ್ರದಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









