ಮಂಗಳೂರು : ಮಂಗಳಮುಖಿಯರು ದರೋಡೆ ಮಾಡುತ್ತಾರೆ, ಯುವಕರನ್ನು ದಾರಿ ತಪ್ಪಿಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿರುವಾಗ , ಇಲ್ಲೊಬ್ಬ ಮಂಗಳಮುಖಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ತಾನು ಬದುಕಲು ರಿಕ್ಷಾ ಖರೀದಿಸಿ, ತನ್ನಿಂದಾಗುವ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ.
ಮೂಲತಃ ರಾಯಚೂರಿನವರಾದ ಅನಿ ಬೆಂಗಳೂರಿನಲ್ಲಿ ಕೆಲಕಾಲ ಇದ್ದರು, ಅಲ್ಲಿ ಬೇರೆ ಮಂಗಳಮುಖಿಯರ ಜೊತೆ ಇದ್ದು ಸಾಕಷ್ಟು ಕಷ್ಟ ಅನುಭವಿಸಿ ಮತ್ತೆ ಮಂಗಳೂರಿಗೆ ಬಂದು ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ. ಪದವಿ ಮಾಡಿದರು. ಬಳಿಕ ಬಿ.ಎಡ್.ನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಬರೆದು ಶಿಕ್ಷಣ ಮೊಟಕುಗೊಳಿಸಿದ್ದರು. ಮಂಗಳೂರಿನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಬದುಕು ಕಟ್ಟಿ ಕೊಂಡಿದ್ದರು.
ಮಂಗಳಮುಖಿಯಾಗಿದ್ದುದರಿಂದ ಆಕೆಗೆ ಆಟೋದವರು ನಿಲ್ಲಿಸುತ್ತಿರಲಿಲ್ಲ. ‘ಒಂದು ದಿನವಂತೂ ಸಂಜೆಯಿಂದ ರಾತ್ರಿವರೆಗೂ ಕಾದು ಯಾವ ರಿಕ್ಷಾದವರೂ ಬಾಡಿಗೆಗೆ ಕರೆದೊಯ್ಯಲು ಒಪ್ಪದಿದ್ದಾಗ ಬೇರೆ ದಾರಿಯಿಲ್ಲದೆ ಸ್ಟೇಟ್ ಬ್ಯಾಂಕ್ ನಿಂದ ರಾತ್ರಿ ನಡೆದುಕೊಂಡೇ ಮನೆ ತಲುಪಿದೆ. ಅಂದೇ ನಾನು ರಿಕ್ಷಾ ಖರೀದಿಸಬೇಕು ಎಂಬ ನಿರ್ಧಾರ ಮಾಡಿದೆ’ ಎಂದು ಮಂಗಳಮುಖಿ ಅನಿ ಹೇಳುತ್ತಾರೆ.
ಈ ಅವಮಾನವನ್ನೇ ಸವಾಲಾಗಿ ಸ್ವೀಕರಿಸಿ ಬ್ಯಾಂಕ್ನಲ್ಲಿ ಸಾಲ ಮಾಡಿ, 4 ರಿಕ್ಷಾ ಖರೀದಿಸಿ, ದೇರಳಕಟ್ಟೆ, ಕುತ್ತಾರು ಪ್ರದೇಶಗಳಲ್ಲಿ ಬಾಡಿಗೆಗೆ ನೀಡಿದ್ದಾರೆ . ಇದರಿಂದ ಅವರಿಗೆ ಮಾಸಿಕವಾಗಿ ನಿಶ್ಚಿತ ಆದಾಯ ಬರುತ್ತಿದೆ. ಇವರು ತಮ್ಮ ರಿಕ್ಷಾದಲ್ಲಿ ತುಂಬು ಗರ್ಭಿಣಿಯರು, ಹಿರಿಯ ಮಂಗಳಮುಖಿಯರಿಗೆ ಉಚಿತ ಪ್ರಯಾಣ ಸೇವೆ ಕಲ್ಪಿಸಿದ್ದಾರೆ.
‘ಅನಿ ಅವರು ಛಲವಂತೆ. ಎಲ್ಲಾ ಕಷ್ಟಗಳನ್ನು ಎದುರಿಸಿ ಬೆಳೆದು ನಿಂತವರು. ಇವರು ಈಗಾಗಲೇ ಶಿವಲೀಲಾ ಎಂಬ ಕನ್ನಡ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಜಿಮ್ ಟ್ರೈನರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ನ ಓಡಾಟಕ್ಕೆ ಟೂ ವ್ಹೀಲರ್ ಖರೀದಿಸಿದ್ದಾರೆ. ಇವರಿಗೆ ಹಿರಿಯ ಮಂಗಳಮುಖಿಯರಿಗೆ ಆಶ್ರಮ ಸ್ಥಾಪಿಸುವ ಗುರಿ ಇದ್ದು, ಇದಕ್ಕಾಗಿ ಪ್ರಯತ್ನ ಮುಂದುವರೆಸಿದ್ದಾರೆ’
ಅನಿ ತನ್ನ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ಮೆಗಾ ಮೀಡಿಯಾದೊಂದಿಗೆ ಮಾತನಾಡಿದ್ದಾರೆ. ಬನ್ನಿ ಇವತ್ತಿನ ಸ್ಟೋರಿಯಲ್ಲಿ ಮಂಗಳ ಮುಖಿ ಅನಿಯವರ ಮನದಾಳದ ಮಾತುಗಳನ್ನು ಕೇಳಿ

ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸಂದರ್ಶನಗಳು, ಸುದ್ದಿಗಳು