ಸ್ಯಾನ್ ಫ್ರಾನ್ಸಿಸ್ಕೋ : ಮೈಕ್ರೋಸಾಫ್ಟ್ ಕಂಪನಿ ಈ ವರ್ಷವೂ ಉದ್ಯೋಗ ಕಡಿತ ಅಭಿಯಾನ ಮುಂದುವರೆಸಿದ್ದು, ತನ್ನ ಜಾಗತಿಕ ಕಾರ್ಯಪಡೆಯ ಶೇ. 4ರಷ್ಟು ಅಂದರೆ 9,100 ಉದ್ಯೋಗಿಗಳಿಗೆ ಗೇಟ್ಪಾಸ್ ಕೊಡಲು ನಿರ್ಧರಿಸಿದೆ.
“ಕ್ರಿಯಾತ್ಮಕ ಮಾರುಕಟ್ಟೆಯಲ್ಲಿ ಕಂಪನಿಯ ಯಶಸ್ಸು ಮತ್ತು ಇರುವ ತಂಡಗಳ ಕಾರ್ಯಕ್ಷಮತೆ ಹೆಚ್ಚಿಸಲು ಅಗತ್ಯವಾದ ಸಾಂಸ್ಥಿಕ ಬದಲಾವಣೆಗಳನ್ನು ನಾವು ಕಾರ್ಯಗತಗೊಳಿಸುವುದನ್ನು ಮುಂದುವರಿಸುತ್ತೇವೆ” ಎಂದು ಮೈಕ್ರೋಸಾಫ್ಟ್ ವಕ್ತಾರರು ಇಮೇಲ್ನಲ್ಲಿ ತಿಳಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಜಾಗತಿಕ ಕಾರ್ಯಪಡೆಯಿಂದ ಸುಮಾರು 6,000 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಮೈಕ್ರೋಸಾಫ್ಟ್, ಈಗ ಮತ್ತೆ ಸುಮಾರು 9 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. 2023 ರಲ್ಲಿ 10,000 ಉದ್ಯೋಗಗಳನ್ನು ಕಡಿತಗೊಳಿಸಿದ ನಂತರ ಇದು ಮೈಕ್ರೋಸಾಫ್ಟ್ನ ಅತಿದೊಡ್ಡ ವಜಾಗೊಳಿಸುವಿಕೆ ಎಂದು ವರದಿ ಹೇಳಿದೆ.
ತನ್ನ ಎಲ್ಲಾ ಉತ್ಪನ್ನಗಳಲ್ಲಿ AI ಅನ್ನು ನಿಯೋಜಿಸುವ ಯೋಜನೆಗಳಲ್ಲಿ ಮುಂದುವರಿಯುತ್ತಿರುವ ಕಂಪನಿಯು, “ಹೊಸ ತಂತ್ರಜ್ಞಾನ ಮತ್ತು ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮೂಲಕ ಅರ್ಥಪೂರ್ಣ ಕೆಲಸದ ಮೇಲೆ ಹೆಚ್ಚಿನ ಸಮಯ ಕೇಂದ್ರೀಕರಿಸಲು ಉದ್ಯೋಗಿಗಳಿಗೆ ಅಧಿಕಾರ ನೀಡಲು” ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ.
ಮೈಕ್ರೋಸಾಫ್ಟ್ ಸೇರಿದಂತೆ ಅನೇಕ ತಂತ್ರಜ್ಞಾನ ಸಂಸ್ಥೆಗಳು ಉದ್ಯೋಗಿಗಳ ದಕ್ಷತೆಯನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆ (AI) ಯತ್ತ ಹೆಚ್ಚು ಒಲುವು ತೋರಿಸುತ್ತಿವೆ. ಈ ವರ್ಷದ ಆರಂಭದಲ್ಲಿ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಕಂಪನಿಯ ಕೋಡ್ನ ಶೇಕಡಾ 20 ರಿಂದ 30 ರಷ್ಟನ್ನು AI ಬರೆಯುತ್ತಿದೆ ಎಂದು ಹೇಳಿದ್ದರು. ಈ ಮಧ್ಯೆ ಮೈಕ್ರೋಸಾಫ್ಟ್ AI ಮೂಲಸೌಕರ್ಯದಲ್ಲಿ ಭಾರಿ ಹೂಡಿಕೆಯನ್ನು ಮುಂದುವರೆಸಿದೆ.
