ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ಮರು ನಾಮಕರಣ ಮಾಡಲು ಸರಕಾರವನ್ನು ಆಗ್ರಹಿಸುವುದಾಗಿ ಮಂಗಳೂರು ಜಿಲ್ಲೆ ತುಳುಪರ ಹೋರಾಟ ಸಮಿತಿಯ ಮುಖಂಡ ದಯಾನಂದ ಕತ್ತಲ್ ಸಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು’ ಎಂದು ಮರು ನಾಮಕರಣ ಮಾಡುವ ಹೋರಾಟಕ್ಕೆ ಸಮಿತಿ ರಚಿಸಲಾಗಿದೆ. ಇದರಲ್ಲಿ ಪದಾಧಿಕಾರಿಗಳ ನೇಮಕ ಮಾಡಿಲ್ಲ ಪಕ್ಷಾತೀತವಾಗಿ ಎಲ್ಲರನ್ನೂ ಒಳಗೊಂಡ ಸಮಿತಿಯಾಗಿದೆ ಎಂದು ದಯಾನಂದ ಕತ್ತಲ್ ಸಾರ್ ತಿಳಿಸಿದ್ದಾರೆ.
ಸಾರ್ವತ್ರಿಕವಾಗಿ ತುಳುನಾಡು ಎಂದು ಈಗಿನ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡನ್ನು ಒಳಗೊಂಡ ಭೂಭಾಗಕ್ಕೆ ರಾಜಕೀಯ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಹೆಸರು ಇತ್ತು. ಸುಮಾರು 2,000 ವರ್ಷಗಳ ಹಿಂದೆ ತಮಿಳಿನ ಸಂಗಂ ಸಾಹಿತ್ಯವಾದ ‘ಅಗನಾನೂರು’ ಎಂಬ ಕಾವ್ಯಮಾಲೆಯ 13ನೇ ಪದ್ಯದಲ್ಲಿ ತುಳುನಾಡು ಎಂಬ ಉಲ್ಲೇಖವಿರುವುದು ನಮ್ಮ ಪ್ರದೇಶದ ಪುರಾತನ ದಾಖಲೆಯಾಗಿದೆ.
ಮುಂದೆ ಆಳುಪರು, ಪಲ್ಲವರು, ಹೊಯ್ಸಳರು, ವಿಜಯನಗರ, ಕೆಳದಿ ರಾಜರು ತುಳು ವಿಷಯ, ತುಳು ದೇಶ, ತುಳು ರಾಜ್ಯ ಎಂದು ನಮ್ಮ ಆವಿಭಜಿತ ಜಿಲ್ಲೆಗಳನ್ನು ಗುರುತಿಸಿರುವುದು ಇತಿಹಾಸದ ಪುಟಗಳಲ್ಲಿ ಸ್ಥಿರವಾಗಿರುವ ದಾಖಲೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಮಂಗಳೂರು ರಾಜ್ಯ ಬಾರ್ಕೂರು ರಾಜ್ಯ ಎಂದು ಈಗಿರುವ ತುಳುನಾಡನ್ನು ವಿಭಾಗಿಸಿ ಆಡಳಿತಾತ್ಮಕವಾಗಿ ಪ್ರಸಕ್ತ ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ರಾಜ್ಯವನ್ನಾಗಿಸಿರುವುದು ಮಂಗಳೂರು ಎಂಬ ಹೆಸರಿಗಿರುವ ಐತಿಹಾಸಿಕ ಮಹತ್ವವನ್ನು ಸಾರುತ್ತದೆ.
ಇಷ್ಟಲ್ಲದೆ ಅನೇಕ ವಿದೇಶಿ ವಿದ್ವಾಂಸರು ತಮ್ಮ ದಾಖಲೆಗಳಲ್ಲಿ ಮಂಗಳೂರನ್ನು ಉಲ್ಲೇಖಿಸಿರುತ್ತಾರೆ. 1931ರಲ್ಲಿ ಎಸ್.ಯು.ಪಣಿಯಾಡಿಯವರು ದಕ್ಷಿಣ ಕನ್ನಡ ಜಿಲ್ಲೆಗೆ ತುಳುನಾಡು ಜಿಲ್ಲೆ ಎಂಬ ಹೆಸರಿಡಬೇಕೆಂದು ಜಿಲ್ಲಾ ಪರಿಷತ್ ನಲ್ಲಿ ಮಂಡಿಸಿದಾಗ ಜಿಲ್ಲೆಗೆ ‘ಮಂಗಳೂರು’ ಎಂದು ಹೆಸರಿಡಬೇಕೆಂಬ ಕೂಗು ಅಲ್ಲಿನ ಪರಿಷತ್ ಸದಸ್ಯರಿಂದ ಬಂದಿತ್ತು ಎಂದು ಕತ್ತಲ್ ಸಾರ್ ಹೇಳಿದ್ದಾರೆ.

ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು