ಬೆಳ್ತಂಗಡಿ: ತಮ್ಮ ಕಂಚಿನ ಕಂಠದ ಸುಮಧುರ ಗಾಯನದಿಂದ ಯಕ್ಷಗಾನ ಕ್ಷೇತ್ರದಲ್ಲಿ ‘ರಸರಾಗ ಚಕ್ರವರ್ತಿ’ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯ ಅವರು ವಯೋಸಹಜ ಅನಾರೋಗ್ಯದಿಂದ ಇಂದು ಬೆಳ್ತಂಗಡಿ ತಾಲೂಕಿನ ಅತ್ಯಡ್ಕ ಗ್ರಾಮದ ಅರಸಿನಮಕ್ಕಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರು 90ರ ದಶಕದಲ್ಲಿ ವೃತ್ತಿರಂಗದಲ್ಲಿ ಬಹುದೊಡ್ಡ ಬೇಡಿಕೆಯಿದ್ದ ಭಾಗವತರಾಗಿದ್ದರು
ಕಲಾ ಸೇವೆ ಮತ್ತು ಬಿರುದು:
ತೆಂಕುತಿಟ್ಟು ಯಕ್ಷಗಾನ ಪರಂಪರೆಯಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಅಮ್ಮಣ್ಣಾಯ ಅವರು ತಮ್ಮ ವಿಶಿಷ್ಟ ಗಾಯನ ಶೈಲಿಯಿಂದ ಭಾಗವತಿಕೆಗೆ ಹೊಸ ಮೆರುಗು ನೀಡಿದ್ದರು. ಇದೇ ಕಾರಣಕ್ಕಾಗಿ ಅವರಿಗೆ ಯಕ್ಷಗಾನ ಅಭಿಮಾನಿಗಳು ‘ರಸರಾಗ ಚಕ್ರವರ್ತಿ’ ಎಂಬ ಬಿರುದನ್ನು ನೀಡಿದ್ದರು. ಅವರ ಭಾಗವತಿಕೆಯನ್ನು ಕೇಳಲು ದೂರದೂರುಗಳಿಂದ ಜನ ಬರುತ್ತಿದ್ದರು. ತುಳು ಪ್ರಸಂಗಗಳಿಗೂ ಅವರು ತಮ್ಮ ಕಂಠಮಾಧುರ್ಯದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು.
ಯಕ್ಷಗಾನ ಪಯಣ:
ದಾಮೋದರ ಮಂಡೆಚ್ಚರವರ ಗರಡಿಯಲ್ಲಿ ಯಕ್ಷಗಾನ ಲೋಕಕ್ಕೆ ಕಾಲಿಟ್ಟ ದಿನೇಶ್ ಅಮ್ಮಣ್ಣಾಯ ಅವರು ಆರಂಭದಲ್ಲಿ ಪುತ್ತೂರು ಮೇಳದಲ್ಲಿ ಚಂಡೆ ಮತ್ತು ಮದ್ದಳೆ ವಾದಕರಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಭಾಗವತಿಕೆಯತ್ತ ಆಸಕ್ತಿ ಬೆಳೆಸಿ, ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧ ಭಾಗವತರಾಗಿ ಗುರುತಿಸಿಕೊಂಡರು. ಪ್ರಸಿದ್ಧ ಡೇರೆ ಮೇಳವಾಗಿದ್ದ ಕರ್ನಾಟಕ ಮೇಳದಲ್ಲಿ ದಿಗ್ಗಜ ಕಲಾವಿದರಿಗೆ ಹಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಎಡನೀರು ಮಠದ ಒಡನಾಟ:
ಎಡನೀರು ಮಠದ ಪರಮಶಿಷ್ಯರಾಗಿದ್ದ ದಿನೇಶ್ ಅಮ್ಮಣ್ಣಾಯ ಅವರು ತಮ್ಮ ಕಲಾ ಜೀವನದ ಬಹುಭಾಗವನ್ನು ಎಡನೀರು ಮಠದ ಮೇಳ ಹಾಗೂ ಎಡನೀರು ಕ್ಷೇತ್ರದಲ್ಲೇ ಯಕ್ಷಗಾನ ಭಾಗವತಿಕೆ ಮಾಡುವ ಮೂಲಕ ಕಳೆದಿದ್ದರು.
ಹಿರಿಯ ಭಾಗವತರ ನಿಧನಕ್ಕೆ ಯಕ್ಷಗಾನ ಲೋಕದ ಗಣ್ಯರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಯಕ್ಷಗಾನ, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









