ಮಂಗಳೂರು: ನಗರದ ಲಾಲ್ಬಾಗ್ನ ಅಪಾರ್ಟ್ಮೆಂಟ್ವೊಂದರಲ್ಲಿ ನಡೆದ ಬಹುದೊಡ್ಡ ಕಳ್ಳತನ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ದಾಖಲೆ ಗತಿಯಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ಟೋಬರ್ 19 ಮತ್ತು 20ರ ರಾತ್ರಿ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಹ್ಯಾಟ್ ಹಿಲ್ನಲ್ಲಿರುವ ಅಪಾರ್ಟ್ಮೆಂಟ್ನ ಮೂರು ಫ್ಲಾಟ್ಗಳಿಗೆ ನುಗ್ಗಿದ್ದ ಕಳ್ಳರು, ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು, ವಿದೇಶಿ ಕರೆನ್ಸಿ (3000 ದಿರ್ಹಂ) ಮತ್ತು ಮೊಬೈಲ್ ಫೋನ್ಗಳನ್ನು ಕಳವು ಮಾಡಿದ್ದರು. ಈ ಸಂಬಂಧ ರಿಯಾಜ್ ರಶೀದ್ ಎಂಬವರು ನೀಡಿದ ದೂರಿನ ಮೇರೆಗೆ ಅಕ್ಟೋಬರ್ 20ರಂದು ಪ್ರಕರಣ ದಾಖಲಾಗಿತ್ತು.
ಘಟನೆ ನಡೆದ ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು, ಉರ್ವಾ ಠಾಣಾಧಿಕಾರಿ ಮತ್ತು ಸಿಬ್ಬಂದಿ ವರ್ಗ, ಶ್ವಾನದಳ ಹಾಗೂ ಫಿಂಗರ್ ಪ್ರಿಂಟ್ ತಜ್ಞರ ತಂಡವು ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿತ್ತು. ಪೊಲೀಸರು ತೀವ್ರ ಕಾರ್ಯಪ್ರವೃತ್ತರಾಗಿ, ಪ್ರಕರಣ ದಾಖಲಾದ ಕೇವಲ 20 ಗಂಟೆಗಳ ಒಳಗಾಗಿ, ಇಬ್ಬರು ಅಂತರಾಜ್ಯ ಮನೆ ಕಳ್ಳರನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದರು. ಬೆಂಗಳೂರು ನಗರ ಪೊಲೀಸರ ಸಹಕಾರದೊಂದಿಗೆ ಅಸ್ಸಾಂನ ಕಾಚಾರ್ ಜಿಲ್ಲೆಯವರಾದ ಅಭಿಜಿತ್ ದಾಸ್ (24) ಮತ್ತು ದೇಬಾ ದಾಸ್ (21) ಎಂಬ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಬಂಧಿತರಲ್ಲಿ ಅಭಿಜಿತ್ ದಾಸ್ ಮೇಲೆ ಈ ಹಿಂದೆ ಬೆಂಗಳೂರು ಮತ್ತು ಅಸ್ಸಾಂನಲ್ಲಿ ಹಲವು ಮನೆ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದು ಬಂದಿದೆ.
ಆರೋಪಿಗಳಿಂದ ಕಳ್ಳತನವಾಗಿದ್ದ ಎಲ್ಲ ಚಿನ್ನಾಭರಣಗಳು, 5,000/- ನಗದು, ಸುಮಾರು 70,000/- ಮೌಲ್ಯದ 3000 ದಿರ್ಹಂ ಹಾಗೂ ಮೊಬೈಲ್ ಫೋನ್ಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು ಡಿಸಿಪಿ ಕ್ರೈಂ ಅವರ ಮೇಲ್ವಿಚಾರಣೆಯಲ್ಲಿ, ಕೇಂದ್ರ ಉಪ ವಿಭಾಗದ ಎಸಿಪಿ ಮತ್ತು ಉರ್ವಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಗಳ ತಂಡವು ಅತ್ಯಂತ ಕ್ಷಿಪ್ರವಾಗಿ ನಿರ್ವಹಿಸಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆದು ಅವರು ಬೇರೆ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಕುರಿತು ತನಿಖೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









