ಕುಂದಾಪುರ: ಸಾಮಾಜಿಕ ಜಾಲತಾಣದಲ್ಲಿ ಛಾಯಾಗ್ರಾಹಕರ ವೃತ್ತಿ ಮತ್ತು ಕಲೆಯ ಬಗ್ಗೆ ಅವಹೇಳನಕಾರಿಯಾಗಿ ಬರೆದ ದಿವಾಕರ್ ಶೆಟ್ಟಿ ಬಸ್ರೂರು ಎಂಬ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕ್ಕೆ ಛಾಯಾಗ್ರಾಹಕರ ಸಮುದಾಯ ಒಗ್ಗಟ್ಟಿನಿಂದ ಹೋರಾಟಕ್ಕೆ ಇಳಿದಿದೆ. ಕನ್ನಡ ರಾಜ್ಯೋತ್ಸವದಂದು ‘ನಮ್ಮ ಕುಂದಾಪುರ’ ಫೇಸ್ಬುಕ್ ಪುಟದಲ್ಲಿ ಪ್ರಕಟವಾದ ಬರಹದಲ್ಲಿ ಛಾಯಾಗ್ರಾಹಕರು ಮತ್ತು ಅವರ ಕುಟುಂಬಗಳಿಗೆ ಅಪಮಾನ ಮಾಡಲಾಗಿದೆ ಎಂದು ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ದಿವಾಕರ್ ಶೆಟ್ಟಿ ಬಸ್ರೂರು ಅವರ ಬರಹದ ವಿರುದ್ಧ ಮೊದಲ ಹಂತವಾಗಿ, ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲಿ ಕುಂದಾಪುರ ಮತ್ತು ಬೈಂದೂರು ವಲಯದ 150ಕ್ಕೂ ಹೆಚ್ಚು ಛಾಯಾಗ್ರಾಹಕರು ಒಗ್ಗೂಡಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬೆಳವಣಿಗೆಯನ್ನು ಸಮುದಾಯದ ಬಲ ಮತ್ತು ಒಗ್ಗಟ್ಟಿನ ಪ್ರದರ್ಶನ ಎಂದು ಪರಿಗಣಿಸಲಾಗಿದೆ.
ಜಿಲ್ಲಾ ಸಮಿತಿಯಿಂದ ನಿರ್ಧಾರ
ಸಂಘಟನೆಯ ಜಿಲ್ಲಾಧ್ಯಕ್ಷರು, ಅವಿಭಜಿತ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಎಲ್ಲಾ 14 ವಲಯಗಳ ಅಧ್ಯಕ್ಷರಿಗೂ ಮನವಿ ಮಾಡಿದ್ದು, ತಮ್ಮ ತಮ್ಮ ವಲಯದ ಪೊಲೀಸ್ ಠಾಣೆಗಳಿಗೆ ತೆರಳಿ ದಿವಾಕರ್ ಶೆಟ್ಟಿ ಬಸ್ರೂರು ವಿರುದ್ಧ ಕಡ್ಡಾಯವಾಗಿ ದೂರು ದಾಖಲಿಸುವಂತೆ ಸೂಚಿಸಿದ್ದಾರೆ. “ಮುಂದಿನ ದಿನಗಳಲ್ಲಿ ಯಾವುದೇ ವ್ಯಕ್ತಿಯಿಂದ ಇಂತಹ ಅವಹೇಳನಕಾರಿ ವರ್ತನೆ ಮರುಕಳಿಸಬಾರದು. ಆ ರೀತಿ ಆತನಿಗೆ ಸರಿಯಾದ ಪ್ರತ್ಯುತ್ತರ ನೀಡುವ ಕಾರ್ಯವಾಗಬೇಕು” ಎಂದು ಜಿಲ್ಲಾಧ್ಯಕ್ಷರು ಕರೆ ನೀಡಿದ್ದಾರೆ.
ಈ ಘಟನೆಯ ಕುರಿತು ಚರ್ಚಿಸಲು ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ನವೆಂಬರ್ 4ರ ಮಂಗಳವಾರದಂದು ಜಿಲ್ಲಾ ಸಮಿತಿ ಕಾರ್ಯಕಾರಿ ಸಭೆಯನ್ನು ಆಯೋಜಿಸಲಾಗಿದ್ದು, ಸಭೆಯಲ್ಲಿ ಖಂಡನಾ ನಿರ್ಣಯವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









