ಪುತ್ತೂರು : ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಹಿಂದೂಪರ ಸಂಘಟನೆಗಳ ನೇತೃತ್ವ ವಹಿಸಿರುವ ಪುತ್ತಿಲ ಪರಿವಾರದ ನಡುವಿನ ರಾಜಕೀಯ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಇತ್ತೀಚೆಗೆ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರನ್ನು ಪುತ್ತಿಲ ಪರಿವಾರದ ಕಾರ್ಯಕರ್ತರು ಹೊರದಬ್ಬಿದ ಗಂಭೀರ ಘಟನೆ ವರದಿಯಾಗಿದೆ. ದೇವತಾ ಕಾರ್ಯಕ್ರಮದ ಪವಿತ್ರ ಸಂದರ್ಭದಲ್ಲೇ ರಾಜಕೀಯ ವೈಮನಸ್ಸು ಬಹಿರಂಗಗೊಂಡಿದ್ದು, ಈ ಘಟನೆಯು ಸ್ಥಳೀಯ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆ ನಡೆದ ನಂತರ, ತೀವ್ರವಾಗಿ ಅವಮಾನಕ್ಕೊಳಗಾದ ಪ್ರಸನ್ನ ಕುಮಾರ್ ಮಾರ್ತ ಅವರು ತಕ್ಷಣವೇ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ನಡೆಗೆ ಬಂದು ಕಣ್ಣೀರಾದರು. ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಅವಮಾನಿಸಿದ ನೋವಿನಿಂದ ಹೊರಬರಲು ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ತಮ್ಮನ್ನು ಹೊರದಬ್ಬಿದ ವ್ಯಕ್ತಿಗಳಿಗೆ ಶಿಕ್ಷೆ ನೀಡಬೇಡಿ, ಬದಲಾಗಿ ಅವರಿಗೆ ಒಳ್ಳೆಯ ಬುದ್ಧಿ ಕೊಡು ಎಂದು ಭಾವುಕರಾಗಿ ಬೇಡಿಕೊಂಡರು. ಈ ವೇಳೆ ಗಲಗಲನೆ ಅತ್ತ ಬಿಜೆಪಿ ಮುಖಂಡರು, ಆನಂತರ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ಈ ಘಟನೆಯಿಂದಾಗಿ ತಮ್ಮ ಪತ್ನಿಯೂ ಸಹ ಮಹಾಲಿಂಗೇಶ್ವರ ದೇವರ ಮಣ್ಣಿನಲ್ಲಿ ಕಣ್ಣೀರಾಕಿದ್ದಾರೆ ಎಂದು ಅವರು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಸನ್ನ ಕುಮಾರ್ ಮಾರ್ತ, ಈ ಹಿಂದೆ ತಾವು ಪುತ್ತಿಲ ಪರಿವಾರದಲ್ಲಿ ಸಕ್ರಿಯರಾಗಿದ್ದಾಗಲೂ ಮತ್ತು ನಂತರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸ್ಥಾನ ಪಡೆದ ಬಳಿಕವೂ ಹಿಂದೂ ಸಮಾಜವನ್ನು ಒಗ್ಗೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು. ಶ್ರೀನಿವಾಸ ಕಲ್ಯಾಣೋತ್ಸವದ ಪ್ರತಿ ಕಾರ್ಯಕ್ರಮದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದೇನೆ. ನಿನ್ನೆಯ ಕಾರ್ಯಕ್ರಮಕ್ಕೆ ಸ್ವತಃ ಪುತ್ತಿಲ ಪರಿವಾರದ ಪ್ರಮುಖರೇ ತಮ್ಮ ಮನೆಗೆ ಬಂದು ಕುಟುಂಬ ಸಮೇತ ಆಹ್ವಾನ ನೀಡಿದ್ದರು. ಆದರೆ, ಇತ್ತೀಚೆಗೆ ನಡೆದ ರಾಜಕೀಯ ವಿದ್ಯಮಾನದ ಹಿನ್ನೆಲೆಯಲ್ಲಿ ತಾವು ಬಿಜೆಪಿಗೆ ರಾಜೀನಾಮೆ ನೀಡಬೇಕೆಂದು ಪುತ್ತಿಲ ಪರಿವಾರದವರು ಒತ್ತಡ ಹೇರುತ್ತಿದ್ದಾರೆ ಎಂದು ಮಾರ್ತ ಆರೋಪಿಸಿದರು. ಈ ಹಿನ್ನೆಲೆಯಲ್ಲಿ, ತಾವು ಕಾರ್ಯಕ್ರಮಕ್ಕೆ ಹೋಗಿದ್ದಾಗ ಗೇಟ್ ಬಳಿಯಿಂದಲೇ ಹೊರದಬ್ಬುವ ಅವಮಾನಕರ ಕೆಲಸ ಮಾಡಿದ್ದಾರೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.
ಕಾರ್ಯಕರ್ತರ ಈ ನಡೆ ಯಾರದ್ದೋ ಪ್ರೇರಣೆಗೊಳಗಾಗಿ ನಡೆದಿದೆ ಎಂದಿರುವ ಪ್ರಸನ್ನ ಕುಮಾರ್ ಮಾರ್ತ, ಈ ಘಟನೆಯ ಹಿಂದೆ ಇರುವವರಿಗೂ ದೇವರು ಬುದ್ಧಿ ಕೊಡಲಿ ಎಂದು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಜವಾಬ್ದಾರಿ ಇರುವ ಇತರ ಮುಖಂಡರು ಇದ್ದರೂ, ತಮ್ಮನ್ನು ಮಾತ್ರ ಟಾರ್ಗೆಟ್ ಮಾಡಿ ಅವಮಾನಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರು ತೀರ್ಮಾನ ಮಾಡುತ್ತಾನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ತಮ್ಮ ರಾಜೀನಾಮೆಗೆ ಒತ್ತಾಯಿಸಿದ ವ್ಯಕ್ತಿಯ ಹೆಸರನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವುದಾಗಿ ಅವರು ತಿಳಿಸಿದರು. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ತಮಗೆ ಕರೆ ಮಾಡಿ ಸಾಂತ್ವಾನ ಹೇಳಿದ್ದಾರೆ ಮತ್ತು ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಪ್ರಮುಖರು ತಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎಂದು ಮಾರ್ತ ಹೇಳಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









