ಮಂಗಳೂರು : ನಗರದಲ್ಲಿ ನಡೆಯುತ್ತಿದ್ದ ಮಾದಕ ವಸ್ತುಗಳ ಮಾರಾಟ ಜಾಲಕ್ಕೆ ಕಾವೂರು ಪೊಲೀಸರು ಮಂಗಳವಾರ ಬೆಳಗ್ಗೆ ಬ್ರೇಕ್ ಹಾಕಿದ್ದಾರೆ. ಬಂಗ್ರ-ಕೂಳೂರು ಫಾಲ್ಗುಣಿ ನದಿಯ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಒಟ್ಟು 80,000 ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ತುಮಕೂರಿನ ನಿವಾಸಿಗಳಾದ ಶಾಫಿ ಅಹ್ಮದ್ (40) ಮತ್ತು ಮುಹಮ್ಮದ್ ಸಮೀರ್ (20) ಎಂದು ಗುರುತಿಸಲಾಗಿದೆ. ಪೊಲೀಸರು ಬಂಧಿತರಿಂದ 70,000 ರೂ. ಮೌಲ್ಯದ 12 ಗ್ರಾಂ ಎಂಡಿಎಂಎ (MDMA), 10,000 ರೂ. ಮೌಲ್ಯದ 275 ಗ್ರಾಂ ಗಾಂಜಾ ಹಾಗೂ ಎರಡು ಮೊಬೈಲ್ ಪೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳು ಈ ಮಾದಕ ವಸ್ತುಗಳನ್ನು ಬೆಂಗಳೂರಿನಿಂದ ಖರೀದಿಸಿ, ಮಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ.
ಬಂಧಿತರಲ್ಲಿ ಪ್ರಮುಖ ಆರೋಪಿ ಶಾಫಿ ಅಹ್ಮದ್ ಗಂಭೀರ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಆತನ ವಿರುದ್ಧ ಈಗಾಗಲೇ 9 ಪ್ರಕರಣಗಳು ದಾಖಲಾಗಿವೆ. ಈತ ಹಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಮತ್ತೊಬ್ಬ ಆರೋಪಿ ಮುಹಮ್ಮದ್ ಸಮೀರ್ ವಿರುದ್ಧವೂ ಒಂದು ಪ್ರಕರಣ ದಾಖಲಾಗಿದೆ.
ಮಂಗಳೂರು ಉತ್ತರ ವಲಯ ಎಸಿಪಿ ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ ಕಾವೂರು ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಬೈಂದೂರ್ ಮತ್ತು ತಂಡವು ಈ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









