ಮಂಗಳೂರು: 2024ರ ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಗವದ್ಗೀತೆ ಮತ್ತು ಮಹಿಳೆಯರ ಕುರಿತು ಅವಹೇಳನಕಾರಿ ಹಾಗೂ ದ್ವೇಷ ಭಾವನೆಯನ್ನು ಪ್ರಚೋದಿಸುವ ಪೋಸ್ಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಪ್ರಮುಖ ಆರೋಪಿಯನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬಯಿ ಚಾರ್ಕೋಪ್ ಮೂಲದ ಫೆಲಿಕ್ಸ್ ಎಡ್ವರ್ಡ್ ಮಥಾಯಿಸ್ (56) ಬಂಧಿತ ಆರೋಪಿಯಾಗಿದ್ದಾನೆ. ಇದೇ ಪ್ರಕರಣದಲ್ಲಿ ಈ ಹಿಂದೆ ಆಗಸ್ಟ್ 11, 2024ರಂದು ಎವಿನ್ ಜಾನ್ ಡಿಸೋಜ (57) ಎಂಬಾತನನ್ನು ಬಂಧಿಸಲಾಗಿತ್ತು. ಸಾರ್ವಜನಿಕ ಶಾಂತಿಗೆ ಭಂಗ ತರುವ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಈ ಕೃತ್ಯದ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಅ.ಕ್ರ. 29/2024ರಲ್ಲಿ ಐಪಿಸಿ 153(ಎ), 504, 507, 509 ಹಾಗೂ ಐಟಿ ಕಾಯ್ದೆ 66(ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ನಡೆದ ಸಂದರ್ಭದಲ್ಲಿ ಆರೋಪಿ ಫೆಲಿಕ್ಸ್ ಎಡ್ವರ್ಡ್ ಮಥಾಯಿಸ್ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಕಾರಣ ತನಿಖೆಗೆ ಮತ್ತು ಬಂಧನಕ್ಕೆ ತೊಡಕಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯ ವಿರುದ್ಧ ಲುಕ್ ಔಟ್ ಸರ್ಕ್ಯುಲರ್ (LOC) ಹೊರಡಿಸಿದ್ದರು. ಈ ಲೋಕೌಟ್ ಸರ್ಕ್ಯುಲರ್ನ ಫಲವಾಗಿ, ಆರೋಪಿಯು ವಿದೇಶದಿಂದ ಮುಂಬಯಿ ಸಹರಾ ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣ, ವಲಸೆ (ಇಮಿಗ್ರೇಶನ್) ಅಧಿಕಾರಿಗಳು ಆತನನ್ನು ತಡೆದು ನಿಲ್ಲಿಸಿ ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ಮಂಗಳೂರು ಪೊಲೀಸರು ತಕ್ಷಣವೇ ಮುಂಬಯಿಗೆ ತೆರಳಿ, ಡಿಸೆಂಬರ್ 05, ಶುಕ್ರವಾರದಂದು ಫೆಲಿಕ್ಸ್ ಮಥಾಯಿಸ್ನನ್ನು ದಸ್ತಗಿರಿ ಮಾಡಿದರು. ಬಂಧಿತ ಆರೋಪಿಯನ್ನು ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮಾತ್ರವಲ್ಲದೆ, ತನಿಖೆಯ ದೃಷ್ಟಿಯಿಂದ ಆರೋಪಿಯ ಪಾಸ್ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಅಪರಾಧ, ಟಾಪ್ ಸುದ್ದಿ, ಸುದ್ದಿಗಳು









