ನವದೆಹಲಿ: ಹೊಸ ವರ್ಷದ ಸಂಭ್ರಮದಲ್ಲಿದ್ದ ಗ್ರಾಹಕರಿಗೆ ಕೇಂದ್ರ ಸರ್ಕಾರ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ. 2026ರ ಮೊದಲ ದಿನವಾದ ಇಂದು ವಾಣಿಜ್ಯ ಬಳಕೆಯ (19 ಕೆಜಿ) ಎಲ್ಪಿಜಿ ಸಿಲಿಂಡರ್ ದರವನ್ನು ಹೆಚ್ಚಿಸಲಾಗಿದ್ದು, ವ್ಯಾಪಾರಸ್ಥರು ಮತ್ತು ಉದ್ದಿಮೆದಾರರಿಗೆ ಇದು ದೊಡ್ಡ ಹೊಡೆತ ನೀಡಿದೆ.
ನಗರವಾರು ದರ ಪಟ್ಟಿ: ಇಂಡಿಯನ್ ಆಯಿಲ್ ಸಂಸ್ಥೆಯ ಮಾಹಿತಿಯಂತೆ, ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1580.50 ರೂ.ನಿಂದ 1691.50 ರೂ.ಗೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಗರಿಷ್ಠ 111 ರೂ. ಏರಿಕೆಯಾಗಿದ್ದು, ಹೊಸ ದರ 1795 ರೂ. ತಲುಪಿದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1700 ರೂ. ಗಡಿ ಮುಟ್ಟಿದ್ದು, ಚೆನ್ನೈನಲ್ಲಿ 1849.50 ರೂ.ಗೆ ತಲುಪಿದೆ. ಕಳೆದ ವರ್ಷ ಬೆಲೆಯಲ್ಲಿ ಸಲ್ಪ ಇಳಿಕೆ ಕಂಡುಬಂದಿತ್ತಾದರೂ, ವರ್ಷದ ಆರಂಭದಲ್ಲೇ ಈ ಏರಿಕೆ ಅಚ್ಚರಿ ಮೂಡಿಸಿದೆ.
ಗೃಹ ಬಳಕೆಗೆ ಸಮಾಧಾನ: ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದ್ದರೂ, ಗೃಹ ಬಳಕೆದಾರರಿಗೆ (14 ಕೆಜಿ ಸಿಲಿಂಡರ್) ಯಾವುದೇ ಬೆಲೆ ಏರಿಕೆಯ ಬಿಸಿ ತಟ್ಟಿಲ್ಲ. ಬೆಂಗಳೂರಿನಲ್ಲಿ ಗೃಹ ಬಳಕೆಯ ಸಿಲಿಂಡರ್ ಎಂದಿನಂತೆ 855.50 ರೂ. ದರದಲ್ಲೇ ಲಭ್ಯವಾಗಲಿದೆ. ದೆಹಲಿ ಮತ್ತು ಮುಂಬೈನಲ್ಲಿಯೂ ಬೆಲೆ ಸ್ಥಿರವಾಗಿದೆ. ವಾಣಿಜ್ಯ ದರ ಏರಿಕೆಯಿಂದಾಗಿ ಹೋಟೆಲ್ ಮತ್ತು ಆಹಾರ ಉದ್ದಿಮೆಗಳ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ವ್ಯವಹಾರ, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









