ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗಡಿಗಳು, ಹೋಟೆಲ್ಗಳು, ಕಂಪನಿಗಳು ಹಾಗೂ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸೂಚಿಸಿದ್ದಾರೆ. ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳು ‘ಟ್ರೇಡ್ ಲೈಸೆನ್ಸ್’ ನೀಡುವಾಗಲೇ ಕನ್ನಡ ನಾಮಫಲಕದ ಶರತ್ತನ್ನು ವಿಧಿಸಬೇಕು ಮತ್ತು ಈ ಬಗ್ಗೆ ನಿಯಮಿತವಾಗಿ ತಪಾಸಣೆ ನಡೆಸಬೇಕು ಎಂದು ನಿರ್ದೇಶಿಸಿದರು. ಮಾಲ್ಗಳಲ್ಲಿರುವ ಅಂಗಡಿಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಮಹಾನಗರ ಪಾಲಿಕೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ.
ಕೇವಲ ವಾಣಿಜ್ಯ ಸಂಸ್ಥೆಗಳಲ್ಲದೆ, ಶಿಕ್ಷಣ ಸಂಸ್ಥೆಗಳು ಮತ್ತು ಸಾರಿಗೆ ಕ್ಷೇತ್ರದಲ್ಲೂ ಕನ್ನಡದ ಬಳಕೆಗೆ ಆದ್ಯತೆ ನೀಡಲಾಗಿದೆ. ಇಂಗ್ಲಿಷ್ ಮಾಧ್ಯಮ ಶಾಲೆ-ಕಾಲೇಜುಗಳ ನಾಮಫಲಕಗಳಲ್ಲಿ ಕನ್ನಡ ಇರಲೇಬೇಕು ಹಾಗೂ ಖಾಸಗಿ ಬಸ್ಸುಗಳ ಬೋರ್ಡುಗಳಲ್ಲಿ ಊರಿನ ಹೆಸರನ್ನು ಕನ್ನಡದಲ್ಲಿ ಬರೆಯುವಂತೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಚನಾ ಫಲಕಗಳಲ್ಲಿ ಕನ್ನಡ ಮಾಹಿತಿ ಅಳವಡಿಸಲು ಹಾಗೂ ಬ್ಯಾಂಕುಗಳಲ್ಲಿ ಅರ್ಜಿ ನಮೂನೆಗಳನ್ನು ಕನ್ನಡದಲ್ಲಿಯೂ ಲಭ್ಯವಾಗುವಂತೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸಭೆಯಲ್ಲಿ ಕನ್ನಡ ಜಾಗೃತಿ ಸಮಿತಿ ಸದಸ್ಯರು ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಬಾರದ ಸಿಬ್ಬಂದಿಯಿಂದ ಗ್ರಾಹಕರಿಗೆ ಆಗುತ್ತಿರುವ ತೊಂದರೆ ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ಆಗುತ್ತಿರುವ ನಿರ್ಲಕ್ಷ್ಯದ ಬಗ್ಗೆ ಚರ್ಚಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ್ ಅವರು ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವಂತೆ ಆಗ್ರಹಿಸಿದರು. ಅಪರ ಜಿಲ್ಲಾಧಿಕಾರಿ ರಾಜು ಕೆ. ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









