ಮಂಗಳೂರು : ಬೆಳ್ತಂಗಡಿ ತಾಲೂಕಿನ ಸುದೆಮುಗೇರು ಎಂಬಲ್ಲಿ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಹಾಡಹಗಲೇ ಕಿಡ್ನಾಪ್ ಯತ್ನ ನಡೆದಿದೆ. ಇಂದು ಬೆಳಿಗ್ಗೆ ಸುಮಾರು 8:30ರ ವೇಳೆಗೆ ಕಾಶಿಬೆಟ್ಟು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸ್ಕೂಟರ್ ನಿಲ್ಲಿಸಿ ಸಂತೆಕಟ್ಟೆಯಲ್ಲಿ ಬಸ್ ಹತ್ತಲು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮಾರುತಿ ಓಮ್ನಿ ಕಾರಿನಲ್ಲಿ ಬಂದ ಮೂವರು ಅಪರಿಚಿತರು ಆಕೆಯನ್ನು ಅಡ್ಡಗಟ್ಟಿ ಬಲವಂತವಾಗಿ ಕಾರಿನೊಳಗೆ ಎಳೆಯಲು ಯತ್ನಿಸಿದ್ದಾರೆ.
ದುಷ್ಕರ್ಮಿಗಳು ತಮ್ಮ ಗುರುತು ಪತ್ತೆಯಾಗದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು ಮತ್ತು ಕಾರಿನ ನಂಬರ್ ಪ್ಲೇಟ್ ಅನ್ನು ಕೂಡ ಬಟ್ಟೆಯಿಂದ ಮುಚ್ಚಿದ್ದರು. ವಿದ್ಯಾರ್ಥಿನಿಯು ಧೈರ್ಯದಿಂದ ಕಿರುಚಾಡಿ ಪ್ರತಿರೋಧ ಒಡ್ಡಿದಾಗ, ಹಿಂಭಾಗದಿಂದ ಮತ್ತೊಂದು ಸ್ಕೂಟರ್ ಬರುತ್ತಿರುವುದನ್ನು ಗಮನಿಸಿದ ಕಿಡ್ನಾಪರ್ಗಳು ಭಯಗೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಘರ್ಷದ ವೇಳೆ ದುಷ್ಕರ್ಮಿಗಳು ಚೂರಿಯಿಂದ ಹಲ್ಲೆ ಮಾಡಿದ್ದರಿಂದ ವಿದ್ಯಾರ್ಥಿನಿಯ ಕೈ ಮತ್ತು ಬೆರಳುಗಳಿಗೆ ಗಾಯಗಳಾಗಿವೆ.
ಪ್ರಸ್ತುತ ಗಾಯಗೊಂಡ ಬಾಲಕಿಯನ್ನು ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿನಿಯ ಕಾಲೇಜು ಬ್ಯಾಗ್ ನೊಂದಿಗೆ ಆರೋಪಿಗಳು ಎಸ್ಕೇಪ್ ಆಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









