ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಬದನಾಜೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ರಕ್ಷಾ ಕ್ಲಿನಿಕ್ ಲ್ಯಾಬೋರೇಟರಿ’ ಎಂಬ ಅನಧಿಕೃತ ರಕ್ತ ಪರೀಕ್ಷಾ ಕೇಂದ್ರದ ಮೇಲೆ ಶನಿವಾರ ಆರೋಗ್ಯ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಬೀಗ ಜಡಿದಿದ್ದಾರೆ. ಈ ಲ್ಯಾಬ್ನಲ್ಲಿ ನೀಡಲಾದ ರಕ್ತ ಪರೀಕ್ಷಾ ವರದಿಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದ್ದಲ್ಲದೆ, ಅಧಿಕೃತ ಸಹಿ ಇಲ್ಲದೆಯೇ ವರದಿಗಳನ್ನು ನೀಡಲಾಗುತ್ತಿತ್ತು. ಈ ಬಗ್ಗೆ ಸಂಶಯಗೊಂಡ ಶರತ್ ಶೆಟ್ಟಿ ಎಂಬುವವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಲ್ಯಾಬ್ನ ಅಸಲಿ ಮುಖವಾಡ ಕಳಚಿಬಿದ್ದಿದೆ.
ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆಯ ವರದಿಯನ್ನಾಧರಿಸಿ, ಜಿಲ್ಲಾ ಆರೋಗ್ಯ ಅಧಿಕಾರಿಯ ಆದೇಶದಂತೆ ಶನಿವಾರ ಈ ಕಾರ್ಯಾಚರಣೆ ನಡೆಸಲಾಯಿತು. ಜಿಲ್ಲಾ ಎನ್ಫೋರ್ಸ್ಮೆಂಟ್ ಅಧಿಕಾರಿ ಡಾ. ದೀಪಾ ಪ್ರಭು ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ನೇತೃತ್ವದ ತಂಡ ಕ್ಲಿನಿಕ್ಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿತು. ಈ ವೇಳೆ ಸದರಿ ಲ್ಯಾಬ್ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (KPME) ಅಡಿಯಲ್ಲಿ ಯಾವುದೇ ನೋಂದಣಿ ಮಾಡಿಕೊಳ್ಳದೆ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವುದು ದೃಢಪಟ್ಟಿದೆ.
ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುತ್ತಿದ್ದ ಈ ಕೇಂದ್ರವನ್ನು ಅಧಿಕಾರಿಗಳು ತಕ್ಷಣವೇ ಬೀಗಮುದ್ರೆ (ಸೀಲ್) ಹಾಕಿ ಮುಚ್ಚಿದ್ದಾರೆ. ಈ ಹಠಾತ್ ದಾಳಿಯ ಸಂದರ್ಭದಲ್ಲಿ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಗಳು ಅಧಿಕಾರಿಗಳಿಗೆ ಸೂಕ್ತ ಭದ್ರತೆ ಒದಗಿಸಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸಾರ್ವಜನಿಕರು ಇಂತಹ ಅನಧಿಕೃತ ಕೇಂದ್ರಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









