ಉಡುಪಿ : ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ನಿವಾಸಿ, ಕುಖ್ಯಾತ ರೌಡಿ ಶೀಟರ್ ಗಣೇಶ್ ಪೂಜಾರಿ (48) ಎಂಬಾತನನ್ನು ಜಿಲ್ಲಾಡಳಿತವು ಕಠಿಣ ‘ಗೂಂಡಾ ಕಾಯ್ದೆ’ ಅಡಿ ಬಂಧಿಸಿದೆ. ಜಿಲ್ಲೆಯಲ್ಲಿ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಸತತವಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಈತನನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರು ಸುದೀರ್ಘ ವರದಿಯನ್ನು ಸಲ್ಲಿಸಿದ್ದರು. ಈ ವರದಿಯನ್ನು ಪುರಸ್ಕರಿಸಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಏಪ್ರಿಲ್ 4 ರಂದು ಬಂಧನ ವಾರಂಟ್ ಹೊರಡಿಸಿದ್ದು, ಅದರ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಈತನನ್ನು ಹೆಚ್ಚಿನ ವಿಚಾರಣೆ ಮತ್ತು ಭದ್ರತೆಯ ದೃಷ್ಟಿಯಿಂದ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಬಂಧಿತ ಗಣೇಶ್ ಪೂಜಾರಿ ದೀರ್ಘಕಾಲದಿಂದ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತನ್ನ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದನು. ಈತನ ವಿರುದ್ಧ ಇದುವರೆಗೆ 4 ಕೊಲೆ ಯತ್ನ, 1 ದರೋಡೆ ಹಾಗೂ 3 ಹಲ್ಲೆ ಪ್ರಕರಣಗಳು ಸೇರಿದಂತೆ ಒಟ್ಟು 11 ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಪೈಕಿ ಈಗಾಗಲೇ ಒಂದರಲ್ಲಿ ಶಿಕ್ಷೆಯಾಗಿದ್ದು, ಏಳು ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದಾನೆ. ಉಳಿದಂತೆ ಒಂದು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದರೆ, ಇನ್ನೆರಡು ಪ್ರಕರಣಗಳು ತನಿಖೆಯ ಹಂತದಲ್ಲಿವೆ. ಪದೇ ಪದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕಠಿಣ ಕ್ರಮ ಕೈಗೊಂಡಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









