ಉಗಾಂಡಾ ಅಧ್ಯಕ್ಷ ಯೊವೆರಿ ಮುಸೆವೇನಿ ಅವರ ಪುತ್ರ ಹಾಗೂ ದೇಶದ ಸೇನಾ ಮುಖ್ಯಸ್ಥರಾದ ಜನರಲ್ ಮುಹೂಜಿ ಕೈನೆರುಗಾಬಾ ಅವರು ಟರ್ಕಿ ದೇಶದ ಮುಂದೆ ಅತ್ಯಂತ ವಿಲಕ್ಷಣ ಬೇಡಿಕೆಯನ್ನಿಟ್ಟು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಸೊಮಾಲಿಯಾದಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳನ್ನು ಎದುರಿಸಲು ಉಗಾಂಡಾ ಸೇನೆ ನೀಡುತ್ತಿರುವ ಕೊಡುಗೆಯನ್ನು ಪರಿಗಣಿಸಿ, ಟರ್ಕಿಯು ತಮಗೆ ಒಂದು ಬಿಲಿಯನ್ ಡಾಲರ್ ಹಣ ಹಾಗೂ ದೇಶದ ಅತ್ಯಂತ ಸುಂದರ ಯುವತಿಯನ್ನು ಪತ್ನಿಯಾಗಿ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಒಂದು ವೇಳೆ 30 ದಿನಗಳಲ್ಲಿ ಈ ಬೇಡಿಕೆ ಈಡೇರಿಸದಿದ್ದರೆ ಟರ್ಕಿಶ್ ರಾಯಭಾರ ಕಚೇರಿ ಮುಚ್ಚುವುದು ಸೇರಿದಂತೆ ತೀವ್ರ ರಾಜತಾಂತ್ರಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸಾಮಾಜಿಕ ಜಾಲತಾಣ X ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸೊಮಾಲಿಯಾದ ಮೂಲಸೌಕರ್ಯ, ಬಂದರು ಮತ್ತು ವಿಮಾನ ನಿಲ್ದಾಣಗಳಿಂದ ಟರ್ಕಿ ಆರ್ಥಿಕ ಲಾಭ ಗಳಿಸುತ್ತಿದೆ, ಆದರೆ ಅಲ್ಲಿನ ಭದ್ರತೆಯ ಭಾರವನ್ನು ಉಗಾಂಡಾ ಹೊರುತ್ತಿದೆ ಎಂಬುದು ಕೈನೆರುಗಾಬಾ ಅವರ ವಾದ. ಇದಕ್ಕಾಗಿ ಅವರು ‘ಭದ್ರತಾ ಲಾಭಾಂಶ’ದ ರೂಪದಲ್ಲಿ ಈ ಹಣ ಮತ್ತು ಮದುವೆ ಹೆಣ್ಣನ್ನು ಕೇಳಿದ್ದಾರೆ. ಈ ಬೇಡಿಕೆಗಳನ್ನು ತಿರಸ್ಕರಿಸಿದರೆ ಟರ್ಕಿಶ್ ಏರ್ಲೈನ್ಸ್ ವಿಮಾನಗಳ ಹಾರಾಟ ನಿಷೇಧಿಸುವುದಾಗಿ ಬೆದರಿಕೆ ಹಾಕಿರುವ ಅವರು, ಉಗಾಂಡಾದ ಪ್ರಜೆಗಳು ಟರ್ಕಿಗೆ ಪ್ರಯಾಣಿಸದಂತೆ ಸಲಹೆ ನೀಡಿದ್ದಾರೆ. ಅಧಿಕಾರದಲ್ಲಿ ಪ್ರಭಾವಶಾಲಿಯಾಗಿರುವ ಇವರ ಈ ಸರಣಿ ಪೋಸ್ಟ್ಗಳು ಉಗಾಂಡಾ ಮತ್ತು ಟರ್ಕಿ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿಸುವ ಸಾಧ್ಯತೆ ದಟ್ಟವಾಗಿದೆ.
ಮುಹೂಜಿ ಕೈನೆರುಗಾಬಾ ಇಂತಹ ವಿಚಿತ್ರ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. 2022ರಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಮದುವೆಯಾಗಲು 100 ಹಸುಗಳನ್ನು ನೀಡುವ ಪ್ರಸ್ತಾಪ ಇಟ್ಟಿದ್ದರು. ಅಷ್ಟೇ ಅಲ್ಲದೆ, ಕೇವಲ ಎರಡು ವಾರಗಳಲ್ಲಿ ಕೀನ್ಯಾದ ನೈರೋಬಿಯನ್ನು ವಶಪಡಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಪ್ರತಿ ಬಾರಿ ಇವರ ಹೇಳಿಕೆಗಳಿಂದ ಮುಜುಗರಕ್ಕೊಳಗಾಗುವ ಇವರ ತಂದೆ ಅಧ್ಯಕ್ಷ ಮುಸೆವೇನಿ ಅವರು ಈ ಹಿಂದೆಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ಷಮೆಯಾಚಿಸಿದ್ದರು. ಈಗ ಟರ್ಕಿ ವಿರುದ್ಧದ ಈ ಹೊಸ ವಿವಾದವು ಉಗಾಂಡಾದ ರಾಜತಾಂತ್ರಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ವಿದೇಶ ಸುದ್ದಿಗಳು, ಸುದ್ದಿಗಳು









