ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಪ್ರಾಣಿಗಳ ನಡುವಿನ ಸಹಜ ಪ್ರಕ್ರಿಯೆಯೊಂದು ಎರಡು ಕುಟುಂಬಗಳ ನಡುವೆ ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣವಾದ ವಿಚಿತ್ರ ಘಟನೆ ನಡೆದಿದೆ. ನೆರೆಹೊರೆಯವರ ಮನೆಯಲ್ಲಿದ್ದ ಗಂಡು ಮತ್ತು ಹೆಣ್ಣು ಬೆಕ್ಕುಗಳ ಒಡನಾಟದಿಂದಾಗಿ, ಹೆಣ್ಣು ಬೆಕ್ಕು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಈ ವಿಚಾರ ಹೆಣ್ಣು ಬೆಕ್ಕಿನ ಮಾಲೀಕರನ್ನು ಕೆರಳಿಸಿದ್ದು, “ನಮ್ಮ ಬೆಕ್ಕು ಮರಿ ಹಾಕಲು ನಿಮ್ಮ ಗಂಡು ಬೆಕ್ಕೇ ಕಾರಣ” ಎಂದು ನೆರೆಮನೆಯವರ ಜೊತೆ ಜಗಳಕ್ಕೆ ಇಳಿದಿದ್ದಾರೆ. ಅಷ್ಟೇ ಅಲ್ಲದೆ, ಹುಟ್ಟಿದ ಮರಿಗಳ ಜವಾಬ್ದಾರಿಯನ್ನು ನೀವೇ ಹೊರಬೇಕು ಎಂದು ವಾದಿಸಿ, ನಾಲ್ಕೂ ಮರಿಗಳನ್ನು ಗಂಡು ಬೆಕ್ಕಿನ ಮಾಲೀಕರ ಮನೆಗೆ ತಂದು ಬಿಟ್ಟಿದ್ದಾರೆ.
ಈ ಸಣ್ಣ ವಿಚಾರದ ಜಗಳ ವಿಕೋಪಕ್ಕೆ ತಿರುಗಿ, ಇಡೀ ಬಡಾವಣೆಯ ಗಮನ ಸೆಳೆಯುವಷ್ಟು ಜೋರಾದ ಕಿರುಚಾಟ ನಡೆದಿದೆ. ಪರಿಸ್ಥಿತಿ ಎಷ್ಟು ಬಿಗಡಾಯಿಸಿತ್ತೆಂದರೆ, ಹೆಣ್ಣು ಬೆಕ್ಕಿನ ಮನೆಯವರು ಗಂಡು ಬೆಕ್ಕಿನ ಮಾಲೀಕರ ಮಕ್ಕಳಿಗೆ ಆಸಿಡ್ ಹಾಕುವುದಾಗಿ ಬೆದರಿಕೆ ಹಾಕುವ ಹಂತಕ್ಕೆ ತಲುಪಿದ್ದರು. ಇದರಿಂದ ಭಯಭೀತರಾದ ಗಂಡು ಬೆಕ್ಕಿನ ಮಾಲೀಕರು ತಕ್ಷಣವೇ 112ಕ್ಕೆ ಕರೆ ಮಾಡಿ ಪೊಲೀಸರ ನೆರವು ಕೋರಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಪೊಲೀಸ್ ತಂಡವು ರೊಚ್ಚಿಗೆದ್ದಿದ್ದ ಎರಡೂ ಕುಟುಂಬಗಳನ್ನು ಸಮಾಧಾನಪಡಿಸಲು ಹರಸಾಹಸ ಪಡಬೇಕಾಯಿತು.
ಪೊಲೀಸರು ಈ ವಿವಾದವನ್ನು ಬಗೆಹರಿಸಲು ಅತ್ಯಂತ ಚಾಣಾಕ್ಷತನದ ಹಾದಿ ತುಳಿದರು. ಎರಡೂ ಕಡೆಯವರ ವಾದವನ್ನು ಆಲಿಸಿದ ಪೊಲೀಸರು, ಅಂತಿಮವಾಗಿ ನಾಲ್ಕು ಬೆಕ್ಕಿನ ಮರಿಗಳಲ್ಲಿ ತಲಾ ಎರಡು ಮರಿಗಳನ್ನು ಎರಡೂ ಕುಟುಂಬಗಳಿಗೆ ಹಂಚುವ ಮೂಲಕ ಒಪ್ಪಂದ ಏರ್ಪಡಿಸಿದರು. ಈ ವಿಚಿತ್ರ ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಇದೊಂದು ಕ್ಲಿಷ್ಟಕರ ಹಾಗೂ ಅಸಾಮಾನ್ಯ ಪರಿಸ್ಥಿತಿಯಾಗಿದ್ದು, ಪೊಲೀಸರು ಸಮಯಪ್ರಜ್ಞೆಯಿಂದ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಹೊಸ ಸುದ್ದಿಗಳು, ಸುದ್ದಿಗಳು









