ಮಂಗಳೂರು : ತಮಿಳುನಾಡು ವಿಧಾನಸಭೆಯ ಪವಿತ್ರ ಸದನದಲ್ಲಿ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ನೀಡಿರುವ ಕೀಳುಮಟ್ಟದ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕಟುವಾಗಿ ಟೀಕಿಸಿದೆ. ರಾಜಕೀಯ ಲಾಭಕ್ಕಾಗಿ ಕೋಟ್ಯಂತರ ಜನರ ನಂಬಿಕೆಯಾಗಿರುವ ಧರ್ಮದ ನಿರ್ಮೂಲನೆಯ ಬಗ್ಗೆ ಮಾತನಾಡುವುದು ಸಂವಿಧಾನ ವಿರೋಧಿ ನಡವಳಿಕೆಯಾಗಿದೆ ಎಂದು ಸಂಘಟನೆ ಕಿಡಿಕಾರಿದೆ. ಸದನದ ಗೌರವವನ್ನು ಕಾಪಾಡುವ ದೃಷ್ಟಿಯಿಂದ ಈ ವಿಷಪೂರಿತ ಮಾತುಗಳನ್ನು ತಮಿಳುನಾಡು ಸರ್ಕಾರವು ಅಧಿಕೃತ ನಡಾವಳಿಗಳಿಂದ ತಕ್ಷಣವೇ ತೆಗೆದುಹಾಕಬೇಕು ಎಂದು ವಿಎಚ್ಪಿ ಆಗ್ರಹಿಸಿದೆ.
ಸನಾತನ ಧರ್ಮವು ಕೇವಲ ಒಂದು ಆಚರಣೆಯಲ್ಲ, ಅದು ಈ ದೇಶದ ಜೀವಾಳ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಇತಿಹಾಸದುದ್ದಕ್ಕೂ ಸನಾತನ ಧರ್ಮವನ್ನು ಅಳಿಸಲು ಹೊರಟ ಅನೇಕ ಶಕ್ತಿಗಳು ತಾವೇ ಇತಿಹಾಸದ ಪುಟ ಸೇರಿವೆ. ಸೂರ್ಯನಂತೆ ಶಾಶ್ವತ ಮತ್ತು ಪ್ರಬಲವಾಗಿರುವ ಈ ಧರ್ಮವನ್ನು ಇಂತಹ ಅಪ್ರಬುದ್ಧ ಹೇಳಿಕೆಗಳಿಂದ ಕುಗ್ಗಿಸಲು ಸಾಧ್ಯವಿಲ್ಲ ಎಂದು ವಿಎಚ್ಪಿ ಅಭಿಪ್ರಾಯಪಟ್ಟಿದೆ. ಈ ದೇಶದ ಮೂಲ ತತ್ವಗಳನ್ನೇ ಪ್ರಶ್ನಿಸುವುದು ಅತ್ಯಂತ ಖೇದಕರ ಎಂದು ಸಂಘಟನೆಯ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ ಅವರು, ಕೇವಲ ಒಂದು ವರ್ಗದ ಮತಗಳ ಓಲೈಕೆಗಾಗಿ ಹಾಗೂ ತುಷ್ಟೀಕರಣ ರಾಜಕಾರಣಕ್ಕಾಗಿ ಸನಾತನ ಧರ್ಮದ ವಿರುದ್ಧ ವಿಷ ಕಾರುವುದು ಹೇಡಿತನದ ಲಕ್ಷಣ ಎಂದು ಟೀಕಿಸಿದ್ದಾರೆ. ಉದಯನಿಧಿ ಅವರ ಹೇಳಿಕೆಗಳು ಕೇವಲ ರಾಜಕೀಯ ಪ್ರೇರಿತವಲ್ಲ, ಅದು ಅವರ ಹಿಂದೂ ವಿರೋಧಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಜಗತ್ತಿನ ಅತ್ಯಂತ ಪ್ರಾಚೀನ ಧರ್ಮವನ್ನು ಅಳಿಸಲು ಈ ಹಿಂದೆಯೂ ಅನೇಕ ಆಕ್ರಮಣಕಾರರು ಪ್ರಯತ್ನಿಸಿ ವಿಫಲರಾಗಿದ್ದಾರೆ ಎಂಬುದನ್ನು ನೆನಪಿನಲ್ಲಿಡಬೇಕು ಎಂದು ಅವರು ಎಚ್ಚರಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









