ಮಂಗಳೂರು : ಭಾರತೀಯ ಹೋಟೆಲ್ ಮತ್ತು ಆತಿಥ್ಯ ರಂಗದ ಅತ್ಯುನ್ನತ ಸಂಘಟನೆಯಾದ ಎನ್ಆರ್ಎಐ (ನೇಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ) ತನ್ನ ಹೊಸ ವಿಭಾಗವನ್ನು ಮಂಗಳೂರು ಹಾಗೂ ಪಶ್ಚಿಮ ಕರ್ನಾಟಕ ಪ್ರಾಂತ್ಯಕ್ಕೆ ವಿಸ್ತರಿಸಿದೆ. ನಗರದ ಹೋಟೆಲ್ ಅವತಾರ್ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಈ ನೂತನ ಘಟಕಕ್ಕೆ ಚಾಲನೆ ನೀಡಲಾಗಿದ್ದು, ಇದು ಕರಾವಳಿ ಭಾಗದ ವೈವಿಧ್ಯಮಯ ಆಹಾರ ಶೈಲಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಹಾಗೂ ಪ್ರವಾಸೋದ್ಯಮದ ಪ್ರಗತಿಗೆ ದೊಡ್ಡ ಮೈಲುಗಲ್ಲಾಗಲಿದೆ ಎಂದು ಸಂಸ್ಥೆಯ ಜನರಲ್ ಮ್ಯಾನೇಜರ್ ನೇಹಾ ಗ್ರೋವರ್ ಆಶಯ ವ್ಯಕ್ತಪಡಿಸಿದ್ದಾರೆ.
ಕರಾವಳಿ ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನರ ಆದಾಯ ಮಟ್ಟ ಸುಧಾರಿಸುತ್ತಿರುವುದು ಮತ್ತು ಪ್ರವಾಸೋದ್ಯಮದ ಕಡೆಗೆ ಆಸಕ್ತಿ ಹೆಚ್ಚುತ್ತಿರುವುದರಿಂದ ಆತಿಥ್ಯ ಕ್ಷೇತ್ರವು ಅಭೂತಪೂರ್ವ ಬೆಳವಣಿಗೆ ಕಾಣುತ್ತಿದೆ. ಮಂಗಳೂರು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ತಲೆಯೆತ್ತುತ್ತಿರುವ ನವನವೀನ ಕೆಫೆಗಳು, ಅತ್ಯಾಧುನಿಕ ರೆಸ್ಟೋರೆಂಟ್ಗಳು, ಬಾರ್ ಹಾಗೂ ಕ್ಲೌಡ್ ಕಿಚನ್ಗಳು ಈ ಪ್ರಗತಿಗೆ ಸಾಕ್ಷಿಯಾಗಿವೆ. ಪ್ರಸ್ತುತ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ವಾರ್ಷಿಕವಾಗಿ ಸುಮಾರು 11 ಕೋಟಿಗೂ ಅಧಿಕ ದೇಶೀಯ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಇದು ಇಡೀ ರಾಜ್ಯದ ಒಟ್ಟು ಪ್ರವಾಸಿಗರ ಹರಿವಿನ ಶೇಕಡಾ 10 ರಿಂದ 15 ರಷ್ಟಿರುವುದು ಈ ಭಾಗದ ಆರ್ಥಿಕ ಸಾಮರ್ಥ್ಯವನ್ನು ತೋರಿಸುತ್ತದೆ.
ಸ್ಥಳೀಯ ಉದ್ಯಮಗಳನ್ನು ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ಈ ಘಟಕ ಪ್ರಮುಖ ಪಾತ್ರ ವಹಿಸಲಿದೆ ಎಂದು ಎನ್ಆರ್ಎಐ ಮಂಗಳೂರು ವಿಭಾಗದ ಮುಖ್ಯಸ್ಥರಾದ ಪ್ರಶಾಂತ್ ರಾವ್ ಅರೂರ್ ತಿಳಿಸಿದ್ದಾರೆ. ದೇಶದ ಒಟ್ಟಾರೆ ಆತಿಥ್ಯ ರಂಗದಲ್ಲಿ ಕರಾವಳಿ ಮಾರುಕಟ್ಟೆ ಅತ್ಯಂತ ಭರವಸೆಯ ಕ್ಷೇತ್ರವಾಗಿ ಮೂಡಿಬರುತ್ತಿದ್ದು, ಹೊಸ ಘಟಕದ ಮೂಲಕ ಉದ್ಯಮಿಗಳ ನಡುವೆ ಪರಸ್ಪರ ಸಹಕಾರ ಹೆಚ್ಚಿಸುವುದು, ಎದುರಾಗುವ ಉದ್ಯಮದ ಸವಾಲುಗಳನ್ನು ಒಗ್ಗಟ್ಟಿನಿಂದ ಎದುರಿಸುವುದು ಮತ್ತು ಇಲ್ಲಿನ ವಿಶಿಷ್ಟ ಕರಾವಳಿ ಖಾದ್ಯಗಳನ್ನು ದೇಶಾದ್ಯಂತ ಜನಪ್ರಿಯಗೊಳಿಸುವುದು ತಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಅವರು ವಿವರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮಾಜಿ ಅಧ್ಯಕ್ಷ ಅನುರಾಗ್ ಕತ್ರಿಯರ್, ಪ್ರಾದೇಶಿಕ ಆಹಾರ ಪದ್ಧತಿಗಳು ಮತ್ತು ದೇಶೀಯ ಪ್ರವಾಸಿಗರ ಭೇಟಿಯು ಭಾರತದ ಹೋಟೆಲ್ ಉದ್ಯಮದ ವೇಗದ ಬೆಳವಣಿಗೆಗೆ ಇಂಧನವಾಗಿವೆ ಎಂದಿದ್ದಾರೆ. ಮಂಗಳೂರಿನ ಜನರ ಉದ್ಯಮಶೀಲತೆ ಹಾಗೂ ಇಲ್ಲಿನ ಆಹಾರ ವೈವಿಧ್ಯತೆಯು ಪ್ರವಾಸೋದ್ಯಮಕ್ಕೆ ಪೂರಕವಾಗಿದ್ದು, ಎನ್ಆರ್ಎಐ ಪ್ರವೇಶದೊಂದಿಗೆ ಈ ಭಾಗದ ಹೋಟೆಲ್ ವ್ಯವಹಾರವು ಪ್ರಾದೇಶಿಕ ಗಡಿಗಳನ್ನು ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ ಸಂಸ್ಥೆಯ ಉಪಾಧ್ಯಕ್ಷ ಪ್ರಣವ್ ರುಂಗ್ತಾ ಅವರು, ಕರ್ನಾಟಕವು ಆತಿಥ್ಯ ರಂಗದಲ್ಲಿ ಮುಂಚೂಣಿಯಲ್ಲಿದ್ದು, ವಿಶೇಷವಾಗಿ ಮಂಗಳೂರಿನ ಮೀನಿನ ಖಾದ್ಯಗಳು ಹಾಗೂ ಇಲ್ಲಿನ ಡೈನಿಂಗ್ ಸಂಸ್ಕೃತಿ ಉದ್ಯಮದ ವಿಸ್ತರಣೆಗೆ ಅಪಾರ ಅವಕಾಶಗಳನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ.
ಕಳೆದ 1982 ರಲ್ಲಿ ಅಸ್ತಿತ್ವಕ್ಕೆ ಬಂದ ಎನ್ಆರ್ಎಐ ಸಂಸ್ಥೆಯು ಭಾರತೀಯ ಆಹಾರ ಸೇವಾ ವಲಯದ ಏಕೈಕ ಮತ್ತು ಪ್ರಭಾವಿ ಧ್ವನಿಯಾಗಿದೆ. ದೇಶಾದ್ಯಂತ ಸರಿಸುಮಾರು 5.69 ಲಕ್ಷ ಕೋಟಿ ರೂಪಾಯಿಗಳ ಬೃಹತ್ ವಹಿವಾಟು ನಡೆಸುವ 5 ಲಕ್ಷಕ್ಕೂ ಅಧಿಕ ಹೋಟೆಲ್ಗಳನ್ನು ಮುನ್ನಡೆಸುತ್ತಿರುವ ಈ ಒಕ್ಕೂಟವು, ಉದ್ಯಮದ ಬಲವರ್ಧನೆಗೆ ಸದಾ ಶ್ರಮಿಸುತ್ತಿದೆ. ಈ ಐತಿಹಾಸಿಕ ಲಾಂಚ್ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿಗಳಾದ ಡೆನ್ ಡಿಸೋಜ, ಅಶ್ವಿನ್ ರೈ, ಸುಧಾಕರ್ ಪೂಂಜಾ, ಶಿವಪ್ರಸಾದ್ ಶೆಟ್ಟಿ ಹಾಗೂ ವರದ್ ರಾಜ್ ಶೆಣೈ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ವ್ಯವಹಾರ, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









