ಮಂಗಳೂರು : ನಗರದ ಕಾಲೇಜು ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು ಮಾದಕ ದ್ರವ್ಯದ ಜಾಲಕ್ಕೆ ಎಳೆಯುತ್ತಿದ್ದ ಇಬ್ಬರು ಕುಖ್ಯಾತ ಡ್ರಗ್ ಪೆಡ್ಲರ್ಗಳನ್ನು ಮಂಗಳೂರು ಸಿಸಿಬಿ (CCB) ಪೊಲೀಸರು ಎರಡು ಪ್ರತ್ಯೇಕ ಕಾರ್ಯಾಚರಣೆಗಳ ಮೂಲಕ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ಬರೋಬ್ಬರಿ 16 ಲಕ್ಷದ 40 ಸಾವಿರ ರೂಪಾಯಿ ಮೌಲ್ಯದ 164 ಗ್ರಾಂ ನಿಷೇಧಿತ ಎಂಡಿಎಂಎ (MDMA) ಮಾದಕ ವಸ್ತುವನ್ನು ಖಾಕಿ ಪಡೆ ವಶಪಡಿಸಿಕೊಂಡಿದೆ.
ಮೊದಲ ಕಾರ್ಯಾಚರಣೆಯಲ್ಲಿ, ಬೆಂಗಳೂರಿನಿಂದ ಎಂಡಿಎಂಎ ತಂದು ಹೊಯಿಗೆ ಬಜಾರ್ ಪರಿಸರದ ಮನೆಯೊಂದರಿಂದ ಗುಪ್ತವಾಗಿ ಮಾರಾಟ ಮಾಡುತ್ತಿದ್ದ 30 ವರ್ಷದ ಪ್ರಣಾಮ್ ಕೋಟ್ಯಾನ್ ಎಂಬಾತನನ್ನು ಪೊಲೀಸರು ತಡೆದಿದ್ದಾರೆ. ಈತನ ಅಡಗುದಾಣದಿಂದ ₹10.40 ಲಕ್ಷ ಮೌಲ್ಯದ 104 ಗ್ರಾಂ ಎಂಡಿಎಂಎ, ಡಿಜಿಟಲ್ ತೂಕದ ಯಂತ್ರ, ಜಿಪ್ ಲಾಕ್ ಕವರ್ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ಮಂಗಳೂರು ದಕ್ಷಿಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಂದಹಾಗೆ ಈ ಪ್ರಣಾಮ್ ಕೋಟ್ಯಾನ್ ಹಳೇ ಗಿರಾಕಿಯಾಗಿದ್ದು, ಈತನ ಮೇಲೆ ಈಗಾಗಲೇ ಹಲ್ಲೆ, ಬೆದರಿಕೆ, ಮಾದಕವಸ್ತು ಸೇವನೆ ಹಾಗೂ ಗಾಂಜಾ ಮಾರಾಟಕ್ಕೆ ಸಂಬಂಧಿಸಿ ನಾಲ್ಕು ಪ್ರಕರಣಗಳು ದಾಖಲಾಗಿವೆ.
ಇನ್ನೊಂದೆಡೆ, ಪದವಿನಂಗಡಿ ಪರಿಸರದ ಮನೆಯೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ತಂಡ, ₹6,00,000 ಮೌಲ್ಯದ 60 ಗ್ರಾಂ ಎಂಡಿಎಂಎ ಸಹಿತ ಮತ್ತೊಬ್ಬ ಆರೋಪಿಯನ್ನು ಸರೆಹಿಡಿದಿದೆ. ಈ ಕಾರ್ಯಾಚರಣೆಯಲ್ಲಿ ಡಿಜಿಟಲ್ ತೂಕದ ಯಂತ್ರ ಹಾಗೂ ಮೊಬೈಲ್ ಪತ್ತೆಯಾಗಿದ್ದು, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಧಿತನನ್ನು ಧನರಾಜ್ ಪೂಜಾರಿ ಅಲಿಯಾಸ್ ಧನು ವಳಚಿಲ್ (33) ಎಂದು ಗುರುತಿಸಲಾಗಿದ್ದು, ಈತ ಕರಾವಳಿಯ ಪೊಲೀಸರಿಗೆ ತಲೆನೋವಾಗಿದ್ದ ರೌಡಿಶೀಟರ್ ಆಗಿದ್ದಾನೆ.
ಪೊಲೀಸ್ ಇತಿಹಾಸ ಕೆದಕಿದಾಗ ಧನು ವಳಚಿಲ್ ಮೇಲೆ ಮಂಗಳೂರು ಮತ್ತು ಬಂಟ್ವಾಳದ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಹಲ್ಲೆ, ಬೆದರಿಕೆ ಸೇರಿದಂತೆ ಬರೋಬ್ಬರಿ 12 ಗಂಭೀರ ಪ್ರಕರಣಗಳು ಇರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, 2016ರ ಸುರತ್ಕಲ್ನ ಗಂಭೀರ ಹಲ್ಲೆ ಕೇಸ್ನಲ್ಲಿ ಈತನಿಗೆ 3 ವರ್ಷಗಳ ಜೈಲು ಶಿಕ್ಷೆಯೂ ಆಗಿತ್ತು. ಸದ್ಯ ಸಿಕ್ಕಿಬಿದ್ದಿರುವ ಈ ಇಬ್ಬರು ಆರೋಪಿಗಳ ಹಿಂದೆ ಇರುವ ದೊಡ್ಡ ಜಾಲ ಹಾಗೂ ಇವರಿಗೆ ಡ್ರಗ್ಸ್ ಪೂರೈಸುತ್ತಿದ್ದ ಕಿಂಗ್ಪಿನ್ಗಳ ಪತ್ತೆಗಾಗಿ ಸಿಸಿಬಿ ಪೊಲೀಸರು ಜಾಲ ಬೀಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









