ಮಂಗಳೂರು: ಮಂಗಳೂರು ನಗರದ ಸೂಟರ್ಪೇಟೆಯಲ್ಲಿ ವೃದ್ಧೆಯೊಬ್ಬರ ಕುತ್ತಿಗೆಯಿಂದ ಲಕ್ಷ್ಮಿ ಪೆಂಡೆಂಟ್ ಹೊಂದಿದ್ದ ಸುಮಾರು 1.50 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ದೋಚಿದ್ದ ಪ್ರಕರಣವನ್ನು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಇಬ್ಬರು ಅಂತರರಾಜ್ಯ ಕಳ್ಳರನ್ನು ಹೆಡೆಮುರಿ ಕಟ್ಟಲಾಗಿದ್ದು, ದುರದೃಷ್ಟವಶಾತ್ ಮತ್ತೊಬ್ಬ ಆರೋಪಿ ಪೊಲೀಸ್ ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಕಳೆದ ಜೂನ್ 14ರಂದು ಎಕ್ಕೂರು ಬಸ್ ನಿಲ್ದಾಣದಿಂದ ಇಳಿದು ಸೂಟರ್ಪೇಟೆ ಗ್ರಾಮ ಲೆಕ್ಕಾಧಿಕಾರಿ ಕಚೇರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯನ್ನು ಗುರಿಯಾಗಿಸಿಕೊಂಡಿದ್ದ ದುಷ್ಕರ್ಮಿಗಳು, ಬೈಕ್ನಲ್ಲಿ ಬಂದು ವಿಳಾಸ ಕೇಳುವ ನಾಟಕವಾಡಿದ್ದರು. ವೃದ್ಧೆ ನಂಬಿ ಹತ್ತಿರ ಬರುತ್ತಿದ್ದಂತೆ ಅವರ ಕುತ್ತಿಗೆಯಲ್ಲಿದ್ದ 12 ಗ್ರಾಂ ತೂಕದ ಚಿನ್ನದ ಸರವನ್ನು ಏಕಾಏಕಿ ಎಳೆದುಕೊಂಡು ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸರಗಳ್ಳರ ಪತ್ತೆಗೆ ಜಾಲ ಬೀಸಿದ್ದ ಪೊಲೀಸರು ಜೂನ್ 26ರಂದು ಪಾಂಡೇಶ್ವರದ ರೋಸಾರಿಯೋ ಶಾಲೆಯ ಆಸುಪಾಸಿನಲ್ಲಿ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದು ಸಾಬೀತಾಗಿದೆ. ಬಂಧಿತರನ್ನು ಉತ್ತರ ಪ್ರದೇಶ ಮೂಲದ ರವಿ ಬೌರಾ (38) ಮತ್ತು ಮೊಹಮ್ಮದ್ ಸಾಹಿಲ್ ಅಲಿಯಾಸ್ ಸಿದ್ದೀಖಿ (26) ಎಂದು ಗುರುತಿಸಲಾಗಿದ್ದು, ನ್ಯಾಯಾಲಯ ಇವರಿಬ್ಬರನ್ನು ಜುಲೈ 6ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಿದೆ. ಆದರೆ, ಇವರೊಂದಿಗಿದ್ದ ಬಾಗಲಕೋಟೆ ಮೂಲದ ಅಲ್ತಾಫ್ ಹುಸೈನ್ ಎಂಬಾತ ವಿನಾಯಕ ಎಂಬ ಪೊಲೀಸ್ ಸಿಬ್ಬಂದಿಯನ್ನು ಬಲವಾಗಿ ತಳ್ಳಿ, ಹಲ್ಲೆ ನಡೆಸಿ ತಪ್ಪಿಸಿಕೊಂಡಿದ್ದಾನೆ. ಗಾಯಾಳು ಪೊಲೀಸರನ್ನು ಉಪಚರಿಸಲಾಗುತ್ತಿದ್ದು, ಆರೋಪಿಯ ಬಂಧನಕ್ಕೆ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










