ಮಂಗಳೂರು : ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಚಿನ್ನದ ವ್ಯಾಪಾರ ನಡೆಸುತ್ತಿರುವ ಕೇರಳ ಮೂಲದ ಉದ್ಯಮಿ ವಿಕಾಸ್ ಎಂಬುವವರ ಕುಟುಂಬ ಜೂನ್ ೨೯ರಂದು ಮುಂಜಾನೆ ಭೀಕರ ದರೋಡೆಗೆ ಒಳಗಾಗಿದೆ. ವಿಕಾಸ್ ಅವರು ತಮ್ಮ ಪತ್ನಿ ರೂಪಾಲಿ ಮತ್ತು ಮಗನೊಂದಿಗೆ ಸಾಂಗ್ಲಿಯಿಂದ ಕೇರಳದ ಪಯ್ಯನ್ನೂರಿನಲ್ಲಿರುವ ತಮ್ಮ ಸ್ವಗೃಹಕ್ಕೆ ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮುಂಜಾನೆ ಸುಮಾರು 2:15ರ ವೇಳೆಗೆ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ಜಂಕ್ಷನ್ನ ದ್ವಾರಾ ಹೋಟೆಲ್ ಸಮೀಪ ತಲುಪಿದಾಗ, ಇನ್ನೋವಾ ಕಾರಿನಲ್ಲಿ ಹೊಂಚು ಹಾಕಿ ಕುಳಿತಿದ್ದ ಏಳು ಮಂದಿ ಸಶಸ್ತ್ರ ದರೋಡೆಕೋರರ ತಂಡ ಇವರ ವಾಹನವನ್ನು ಅಡ್ಡಗಟ್ಟಿದೆ.
ಉದ್ಯಮಿ ವಿಕಾಸ್ ಅವರನ್ನು ಕಾರಿನಿಂದ ಬಲವಂತವಾಗಿ ಕೆಳಗೆ ತಳ್ಳಿದ ದುಷ್ಕರ್ಮಿಗಳು, ಅವರ ಪತ್ನಿ ಮತ್ತು ಮಗ ಒಳಗಡೆ ಇರುವಾಗಲೇ ಅದೇ ಕಾರನ್ನು ಅಪಹರಿಸಿ ಪಣಂಬೂರು ಬೀಚ್ ರಸ್ತೆಯ ಕಡೆಗೆ ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ನಿರ್ಜನ ಪ್ರದೇಶಕ್ಕೆ ತಲುಪುತ್ತಿದ್ದಂತೆ ಕಾರಿನಲ್ಲಿದ್ದ ಬರೋಬ್ಬರಿ 180 ಗ್ರಾಂ ತೂಕದ ಚಿನ್ನಾಭರಣಗಳನ್ನು ದರೋಡೆಕೋರರು ಕಸಿದುಕೊಂಡಿದ್ದಾರೆ. ಆದರೆ ಮಹಿಳೆ ಧರಿಸಿದ್ದ ಚಿನ್ನದ ಸರವನ್ನು ಮಾತ್ರ ಮುಟ್ಟದೆ ಹಾಗೇ ಬಿಟ್ಟಿದ್ದಾರೆ. ಬಳಿಕ ತಾಯಿ ಮತ್ತು ಮಗನನ್ನು ರಸ್ತೆ ಬದಿಯಲ್ಲೇ ಕೈಬಿಟ್ಟು, ಲೂಟಿ ಮಾಡಿದ ಚಿನ್ನ ಹಾಗೂ ಅಪಹರಿಸಿದ ಸ್ವಿಫ್ಟ್ ಕಾರಿನೊಂದಿಗೆ ದರೋಡೆಕೋರರು ಪರಾರಿಯಾಗಿದ್ದಾರೆ.
ಈ ಶಾಕಿಂಗ್ ಘಟನೆಯ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದರೋಡೆ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಣಂಬೂರು ಪೊಲೀಸರು ಉದ್ಯಮಿ ವಿಕಾಸ್ ಹಾಗೂ ಅವರ ಪತ್ನಿ ರೂಪಾಲಿ ಅವರನ್ನು ಘಟನಾ ಸ್ಥಳಕ್ಕೆ ಕರೆತಂದು ಇಂಚಿಂಚೂ ಮಾಹಿತಿ ಕಲೆಹಾಕಿದ್ದಾರೆ. ಬೈಕಂಪಾಡಿ ಜಂಕ್ಷನ್ ಮತ್ತು ಹೈವೇ ಲೇನ್ಗಳ ಅಳತೆಯನ್ನು ಪಡೆದು ತೀವ್ರ ತನಿಖೆ ಕೈಗೊಂಡಿರುವ ಪೊಲೀಸರು, ಸ್ಥಳ ಮಹಜರು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಸದ್ಯ ಆರೋಪಿಗಳ ಕುರಿತು ಪ್ರಮುಖ ಸುಳಿವುಗಳು ಲಭ್ಯವಾಗಿದ್ದು, ದರೋಡೆಕೋರರ ಬಂಧನ ಹಾಗೂ ಕಳುವಾದ ಕಾರು ಮತ್ತು ಚಿನ್ನವನ್ನು ವಶಪಡಿಸಿಕೊಳ್ಳಲು ವಿಶೇಷ ಪೊಲೀಸ್ ತಂಡಗಳು ತೀವ್ರ ಜಾಲ ಬೀಸಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










