ಮಂಗಳೂರು: ಎಸ್ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ವಿಶೇಷ ಸಹಕಾರ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು, ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ಕ್ಷೇತ್ರವು ನಿರಂತರವಾಗಿ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು. “ಸಹಕಾರದಿಂದ ಸಮೃದ್ಧಿ” ಎಂಬ ಉದಾತ್ತ ಧೈಯದೊಂದಿಗೆ ದೇಶದಲ್ಲೇ ಮೊದಲ ಬಾರಿಗೆ ಈ ವಿಶೇಷ ಸಪ್ತಾಹವನ್ನು ಆಚರಿಸಲಾಗುತ್ತಿದೆ ಎಂದ ಅವರು, ನಮ್ಮದು ಯಾವುದೇ ರಾಜಕೀಯ ಪಕ್ಷವಲ್ಲ, ಅದು ಕೇವಲ ‘ಸಹಕಾರ ಪಕ್ಷ’ ಎಂದರು. ರಾಜ್ಯದಲ್ಲಿ 47 ಸಾವಿರಕ್ಕೂ ಹೆಚ್ಚು ಸಹಕಾರಿ ಸಂಘಗಳಿದ್ದು, ದೇಶಾದ್ಯಂತ 30 ಕೋಟಿಗೂ ಅಧಿಕ ಸದಸ್ಯರು ಈ ವ್ಯವಸ್ಥೆಯಲ್ಲಿದ್ದಾರೆ. ಜನಸಾಮಾನ್ಯರ ಆರ್ಥಿಕ ಸಂಕಷ್ಟದ ಸಮಯದಲ್ಲಿ ನೆರವಾಗುತ್ತಾ, ಅವರ ಮನೆಬಾಗಿಲಿಗೇ ಬ್ಯಾಂಕಿಂಗ್ ಸೇವೆ ತಲುಪಿಸುವಲ್ಲಿ ಸಹಕಾರ ರಂಗ ಯಶಸ್ವಿಯಾಗಿದೆ ಎಂದು ಹೆಮ್ಮೆಯಿಂದ ನುಡಿದ ಅವರು, ಎಲ್ಲರೂ ಸಹಕಾರ ತತ್ವದೊಂದಿಗೆ ಒಟ್ಟಾಗಿ ಸಾಗೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಸಹಕಾರ ಸಪ್ತಾಹದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕ ವೇದವ್ಯಾಸ್ ಡಿ. ಕಾಮತ್ ಅವರು, ಭಾರತೀಯರ ಜೀವನ ಶೈಲಿಯಲ್ಲೇ ಸಹಕಾರ ತತ್ವ ಹಾಸುಹೊಕ್ಕಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರಧಾನಮಂತ್ರಿಯವರ “ವಿಕಸಿತ ಭಾರತ”ದ ಕನಸು ನನಸಾಗಲು ಸಹಕಾರ ಕ್ಷೇತ್ರದ ಬೆಳವಣಿಗೆಯೇ ಮುಖ್ಯ ಗುರಿಯಾಗಿದೆ ಎಂದು ಅವರು ಇದೇ ವೇಳೆ ಶುಭ ಹಾರೈಸಿದರು. ಮತ್ತೊಬ್ಬ ಮುಖ್ಯ ಅತಿಥಿ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (ಕೆಎಂಪಿಸಿಎಫ್) ಅಧ್ಯಕ್ಷ ರವಿರಾಜ್ ಹೆಗ್ಡೆ ಅವರು ಮಾತನಾಡಿ, ಇಂದಿನ ಆಧುನಿಕ ಯುಗಕ್ಕೆ ತಕ್ಕಂತೆ ಸಹಕಾರ ರಂಗವು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಇನ್ನೂ ಹೆಚ್ಚಿನ ಉತ್ತಮ ಸೌಲಭ್ಯಗಳನ್ನು ನೀಡುವಂತಾಗಬೇಕು ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಹೆಚ್. ಎನ್. ರಮೇಶ್, ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯವು 5 ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ವಿಶೇಷ ಸಪ್ತಾಹವು ಅತ್ಯಂತ ಮಹತ್ವದ್ದಾಗಿದೆ ಎಂದರು. ವಿಶ್ವಕರ್ಮ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹರೀಶ್ ಆಚಾರ್ಯ ಅವರು ಮಾತನಾಡಿ, ಜಾತಿ-ಧರ್ಮಗಳ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಆಚರಿಸುವ ಹಬ್ಬವೇ ಸಹಕಾರಿ ಸಪ್ತಾಹ ಎಂದರು. ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ರಂಗದ ಪಿತಾಮಹ ಮೊಳಹಳ್ಳಿ ಶಿವರಾಯರು ಅಂದು ಹಾಕಿಕೊಟ್ಟ ಬಲವಾದ ಬುನಾದಿಯಿಂದಾಗಿ ಈ ಕ್ಷೇತ್ರ ಇಂದು ದೇಶಾದ್ಯಂತ ವಿಸ್ತರಿಸಿದೆ. ಆ ಬಳಿಕ ಡಾ. ರಾಜೇಂದ್ರ ಕುಮಾರ್ ಅವರು ತಮ್ಮ ನಾಯಕತ್ವದ ಮೂಲಕ ಇಡೀ ಸಹಕಾರಿ ರಂಗವನ್ನು ದೇಶದಲ್ಲೇ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ ಎಂದು ಶ್ಲಾಘಿಸಿದರು. ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಸಹಕಾರ ಮಾರಾಟ ಮಹಾಮಂಡಳ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










