ಮಂಗಳೂರು : ನಾಗುರಿಯಲ್ಲಿ ಸಂಭವಿಸಿದ ಭೀಕರ ಜೀವಹಾನಿಗೆ ಅವೈಜ್ಞಾನಿಕ ಹಾಗೂ ಕಳಪೆ ಮಟ್ಟದ ಕಾಂಪೌಂಡ್ ಗೋಡೆ ನಿರ್ಮಾಣವೇ ಪ್ರಮುಖ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಮಳೆಗಾಲದ ಭಾರಿ ನೀರಿನ ಒತ್ತಡವನ್ನು ತಡೆದುಕೊಳ್ಳಲಾಗದೆ ಈ ಕಾಂಪೌಂಡ್ ಗೋಡೆಯು ಸೀದಾ ವಾಸದ ಮನೆಯ ಹಿಂಭಾಗದ ಗೋಡೆಯ ಮೇಲೆ ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯ ದೋಷದ ಕುರಿತು ತೀವ್ರ ತನಿಖೆ ಆರಂಭಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಕಮಿಷನರ್ ಸೂಚಿಸಿದ್ದಾರೆ.
ದುರಂತಕ್ಕೆ ಕಾರಣವಾದ ತಾಂತ್ರಿಕ ಹಾಗೂ ವೈಜ್ಞಾನಿಕ ಆಯಾಮಗಳನ್ನು ಪತ್ತೆಹಚ್ಚುವ ಕೆಲಸ ಪ್ರಗತಿಯಲ್ಲಿದೆ. ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತವಾಗಿ ಗುಡ್ಡ ಅಗೆದವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ. ಈ ಇಡೀ ಪ್ರಕರಣದ ನಿಖರ ತನಿಖೆಗಾಗಿ ತಾಂತ್ರಿಕ ತಜ್ಞರ ವಿಶೇಷ ತಂಡದ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದ್ದು, ಅವರಿಂದ ಅಧಿಕೃತ ತಾಂತ್ರಿಕ ವರದಿ ಕೈ ಸೇರಿದ ತಕ್ಷಣವೇ ಹೊಣೆಗಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ.
ಈ ಘೋರ ದುರಂತದಲ್ಲಿ ಹೆಂಚಿನ ಮನೆಯ ಅವಶೇಷಗಳ ಅಡಿಯಲ್ಲಿ ಸಿಲುಕಿ ಬಿಹಾರ ಮೂಲದ ಎಂಟು ವರ್ಷದ ಬಾಲಕಿ ಅನಾಮಿಕ ಚೌರಾಸಿಯ, ನಾಲ್ಕು ವರ್ಷದ ಪುಟ್ಟ ಮಗು ಪರಿ ಹಾಗೂ 46 ವರ್ಷದ ಶಾಂತ ಎಂಬ ಮಹಿಳೆ ದಾರುಣವಾಗಿ ಮೃತಪಟ್ಟಿದ್ದಾರೆ. ನಿರಂತರ ಮಳೆಯಿಂದಾಗಿ ಗೋಡೆ ಧಾವಿಸಿ ಬಂದಾಗ ಮನೆಯಲ್ಲಿದ್ದ ಈ ಮೂವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಪ್ರಾಣ ಕಳೆದುಕೊಂಡಿದ್ದಾರೆ.
ಇದೇ ವೇಳೆ ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಭೀಕರ ಅವಘಡದ ಮಧ್ಯೆಯೂ ಮೂವರು ಜೀವಂತವಾಗಿ ಪಾರಾಗಿದ್ದಾರೆ. 14 ವರ್ಷದ ಅಲ್ಕಾ, 11 ವರ್ಷದ ಅನುಷಾ ಹಾಗೂ 48 ವರ್ಷದ ಬಾಲಕೃಷ್ಣ ಎಂಬುವವರನ್ನು ರಕ್ಷಿಸಲಾಗಿದೆ. ಬದುಕುಳಿದ ಬಾಲಕೃಷ್ಣ ಅವರು ಮೂಲತಃ ಬಿಹಾರ ರಾಜ್ಯದವರಾಗಿದ್ದು, ಕಳೆದ 20 ವರ್ಷಗಳಿಂದ ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದ ಈ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು ಎಂದು ಮಾಹಿತಿ ಲಭ್ಯವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










