
ಮಂಗಳೂರು : ಮಂಗಳೂರಿನ ಬೈಕಂಪಾಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಹಾರಾಷ್ಟ್ರ ಮೂಲದ ಚಿನ್ನದ ವರ್ತಕರನ್ನು ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ ಮಾಡಿದ್ದ ದೊಡ್ಡ ಜಾಲವೊಂದನ್ನು ಭೇದಿಸಲು ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಜೂನ್ 29ರಂದು ಮುಂಜಾನೆ ನಡೆದಿದ್ದ ಈ ಭೀಕರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಹದಿನಾರು ಮಂದಿಯ ಗ್ಯಾಂಗ್ ಪೈಕಿ ಮೂವರು ಆರೋಪಿಗಳನ್ನು ಸದ್ಯ ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಮೂಲದ ನಿಮಿಲ್ ಆರ್.ಕೆ (37) ಹಾಗೂ ಕೊಡಗಿನ ಇರ್ಷಾದ್ (40) ಮತ್ತು ಮುಸ್ತಾಫ (49) ಬಂಧಿತ ಆರೋಪಿಗಳಾಗಿದ್ದಾರೆ.
ಮಹಾರಾಷ್ಟ್ರದಿಂದ ಕುಟುಂಬದೊಂದಿಗೆ ಕಾರಿನಲ್ಲಿ ಕೇರಳದ ಪಯ್ಯನ್ನೂರಿಗೆ ತೆರಳುತ್ತಿದ್ದ ವಿಕಾಸ್ ಸುಬ್ಬರಾವ್ ಧನವಡೆ ಎಂಬ ವ್ಯಾಪಾರಿಯನ್ನು ದರೋಡೆಕೋರರ ಗುಂಪು ಟಾರ್ಗೆಟ್ ಮಾಡಿತ್ತು. ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಮುಸುಕುಧಾರಿಗಳು, ಬೈಕಂಪಾಡಿ ಬಳಿ ಇವರ ಕಾರನ್ನು ತಡೆದು ತಲವಾರುಗಳಿಂದ ಹಲ್ಲೆ ನಡೆಸಿದ್ದರು. ಅಷ್ಟೇ ಅಲ್ಲದೆ, ವಿಕಾಸ್ ಅವರ ಪತ್ನಿ ಮತ್ತು ಮಗನನ್ನು ಅಪಹರಿಸಿ ಕೆಲ ದೂರದ ಬಳಿಕ ರಸ್ತೆಯಲ್ಲೇ ಬಿಟ್ಟು ಹೋಗಿದ್ದರು. ಈ ಸಂದರ್ಭದಲ್ಲಿ ಬರೋಬ್ಬರಿ 20 ಲಕ್ಷ ರೂಪಾಯಿ ಮೌಲ್ಯದ 180 ಗ್ರಾಂ ಬಂಗಾರ, ಮೊಬೈಲ್ ಮತ್ತು ಕಾರು ಸೇರಿದಂತೆ ಒಟ್ಟು 23.10 ಲಕ್ಷ ಮೌಲ್ಯದ ಸೊತ್ತನ್ನು ಸುಲಿಗೆ ಮಾಡಿ ಗ್ಯಾಂಗ್ ಪರಾರಿಯಾಗಿತ್ತು.
ಈ ಹೈವೇ ದರೋಡೆಯ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಕೇರಳ ಮತ್ತು ಕೊಡಗಿನ ಲಿಂಕ್ ಸಿಕ್ಕಿದೆ. ಜುಲೈ 2 ರಂದು ಕಣ್ಣೂರಿನಲ್ಲಿ ನಿಮಿಲ್ನನ್ನು ಹಾಗೂ ಕೊಡಗಿನ ವಿವಿಧ ಭಾಗಗಳಲ್ಲಿ ಇರ್ಷಾದ್ ಮತ್ತು ಮುಸ್ತಾಫನನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 16 ಆರೋಪಿಗಳ ಪೈಕಿ 14 ಮಂದಿ ನೇರವಾಗಿ ಸ್ಥಳದಲ್ಲಿ ಭಾಗಿಯಾಗಿದ್ದರೆ, ಇನ್ನುಳಿದ ಇಬ್ಬರು ಕಾರು ಹಾಗೂ ಆಶ್ರಯ ನೀಡಿ ಸಹಾಯ ಮಾಡಿದ್ದರು. ಜುಲೈ 3 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಈ ಮೂವರನ್ನು ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಸದ್ಯ ಕೃತ್ಯಕ್ಕೆ ಬಳಸಲಾದ ಒಂದು ಇನ್ನೋವಾ ಮತ್ತು ದರೋಡೆಗೊಳಗಾಗಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನುಳಿದ ಆರೋಪಿಗಳು ಹಾಗೂ ಚಿನ್ನಾಭರಣಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಚಿತ್ರ : ಎಐ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










