ಮಂಗಳೂರು : ಮಂಗಳೂರಿನ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಅರಿಕೆರೆ ಎಂಬಲ್ಲಿ ಇತ್ತೀಚೆಗೆ ನಡೆದಿದ್ದ ವ್ಯಕ್ತಿಯೊಬ್ಬನ ರಕ್ತಸಿಕ್ತ ಕೊಲೆ ಪ್ರಕರಣದ ಸುಳಿವು ಪತ್ತೆಹಚ್ಚುವಲ್ಲಿ ಕರಾವಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹೆಡೆಮುಡಿಕಟ್ಟಲಾಗಿದೆ. ಜೂನ್ 10 ರಂದು ಜೋಕಟ್ಟೆ ಅರಿಕೆರೆ ಸಮೀಪದ ಎಂಎಸ್ಇಝಡ್ಗೆ ಸೇರಿದ ನೀರು ಹರಿಯುವ ಹಳ್ಳದಲ್ಲಿ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿತ್ತು. ಈ ಭೀಕರ ದೃಶ್ಯ ಕಂಡು ಸ್ಥಳೀಯ ನಿವಾಸಿ ಕಿಶೋರ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಪಣಂಬೂರು ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು ವಿಶೇಷ ತನಿಖೆ ಕೈಗೆತ್ತಿಕೊಳ್ಳಲಾಗಿತ್ತು.
ಪೊಲೀಸರ ಚುರುಕಿನ ತನಿಖೆಯ ವೇಳೆ ಕೊಲೆಯಾದ ವ್ಯಕ್ತಿ ಬಿಹಾರ ಮೂಲದ 36 ವರ್ಷದ ಚಂದನ್ ಚೌಹಾನ್ ಎಂದು ಪತ್ತೆಯಾಗಿದೆ. ಹಂತಕರ ಪತ್ತೆಗೆ ಬಲೆಬೀಸಿದ್ದ ಸಿಸಿಬಿ ಮತ್ತು ಪಣಂಬೂರು ಪೊಲೀಸರು, ಹತ್ಯೆ ನಡೆಸಿ ರಾಜ್ಯದಿಂದಲೇ ಪರಾರಿಯಾಗಿದ್ದ ಪ್ರಮುಖ ಆರೋಪಿ ಪ್ರಶಾಂತ್ ಕುಮಾರ್ನನ್ನು ಜೂನ್ 13ರ ನಡುರಾತ್ರಿ ಗೋವಾದ ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಪಿಂಕೂ ಮಹ್ತೋ ಎಂಬಾತನನ್ನು ಜೋಕಟ್ಟೆಯ ವಿಜಯ ವಿಠಲ ಭಜನಾ ಮಂದಿರದ ಸಮೀಪದ ಅಡಗುದಾಣದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ವಿಚಾರಣೆ ವೇಳೆ ಈ ಕೊಲೆಯ ಹಿಂದಿನ ಕೌಟುಂಬಿಕ ಹಗೆತನದ ಆಘಾತಕಾರಿ ಕಾರಣ ಬೆಳಕಿಗೆ ಬಂದಿದೆ. ಮುಖ್ಯ ಆರೋಪಿ ಪ್ರಶಾಂತ್ ಕುಮಾರ್ನ ಪತ್ನಿಯು ಕಳೆದ ಏಪ್ರಿಲ್ ತಿಂಗಳಲ್ಲಿ ಮತ್ತೊಬ್ಬ ಯುವಕನೊಂದಿಗೆ ಓಡಿಹೋಗಿದ್ದಳು. ಆಕೆ ಮನೆ ಬಿಟ್ಟು ಹೋಗಲು ಚಂದನ್ ಚೌಹಾನ್ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೆರವಾಗಿದ್ದ ಎನ್ನುವ ತೀವ್ರ ಅನುಮಾನ ಪ್ರಶಾಂತ್ನನ್ನು ಕಾಡುತ್ತಿತ್ತು. ಇದರ ಬೆನ್ನಲ್ಲೇ ಚಂದನ್ ಚೌಹಾನ್ ಸಾರ್ವಜನಿಕವಾಗಿ ಪ್ರಶಾಂತ್ ಕುಮಾರ್ ಬಗ್ಗೆ ಅಪಪ್ರಚಾರ ಮಾಡುತ್ತಾ ಹೀಯಾಳಿಸುತ್ತಿದ್ದ ಎನ್ನಲಾಗಿದೆ. ಇದರಿಂದ ತೀವ್ರ ಆಕ್ರೋಶಗೊಂಡಿದ್ದ ಇಬ್ಬರು ಆರೋಪಿಗಳು ಚಂದನ್ನನ್ನು ಮುಗಿಸಲು ಸಂಚು ರೂಪಿಸಿದ್ದರು.
ಯೋಜನೆಯಂತೆ ಜೂನ್ 9 ರಂದು ಸಂಜೆ ಚಂದನ್ನನ್ನು ತಡೆದು ನಿಲ್ಲಿಸಿದ ಆರೋಪಿಗಳು, ದೊಣ್ಣೆಗಳಿಂದ ಆತನ ತಲೆ ಹಾಗೂ ಮುಖಕ್ಕೆ ತೀವ್ರವಾಗಿ ಜಜ್ಜಿ ರಕ್ತದ ಮಡುವಿನಲ್ಲಿ ಬೀಳಿಸಿದ್ದರು. ಬಳಿಕ ಚಾಕುವಿನಿಂದ ಆತನ ಕುತ್ತಿಗೆಯನ್ನು ಸೀಳಿ ಅಮಾನವೀಯವಾಗಿ ಕೊಲೆ ಮಾಡಿದ್ದರು. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಜೋಕಟ್ಟೆಯಲ್ಲಿರುವ ತಮ್ಮ ಬಾಡಿಗೆ ಮನೆಯ ಪಕ್ಕದ ಚರಂಡಿಗೆ ಎಸೆದು ಪರಾರಿಯಾಗಿದ್ದರು.
ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ (ಎಸಿಪಿ) ಶ್ರೀಕಾಂತ ಕೆ. ಅವರ ಮಾರ್ಗದರ್ಶನದಲ್ಲಿ, ಪಣಂಬೂರು ಇನ್ಸ್ಪೆಕ್ಟರ್ ಸಲೀಂ ಅಬ್ಬಾಸ್ ನೇತೃತ್ವದ ತಂಡವು ಅತ್ಯಂತ ಕಡಿಮೆ ಅವಧಿಯಲ್ಲಿ ಈ ಕೊಲೆ ರಹಸ್ಯವನ್ನು ಭೇದಿಸಿದೆ. ಈ ಭೇಟೆ ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕರಾದ ಶ್ರೀಕಲಾ ಕೆ.ಟಿ., ಜ್ಞಾನಶೇಖರ ಹಾಗೂ ಸಿಬ್ಬಂದಿಗಳಾದ ಇಮ್ತಿಯಾಝ್, ಸುರೇಂದ್ರ, ಚೆರಿಯನ್, ದೀಪಕ್, ಫಕ್ಕಿರೇಶ್, ರಾಕೇಶ್ ಮತ್ತು ಮಂಜುನಾಥ್ ಶ್ಲಾಘನೀಯ ಪಾತ್ರ ವಹಿಸಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಅಪರಾಧ, ಟಾಪ್ ಸುದ್ದಿ, ಸುದ್ದಿಗಳು









