ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಳದಿ ರೋಗ (ಜಾಂಡೀಸ್) ಹಾಗೂ ಡೆಂಗ್ ಪ್ರಕರಣಗಳು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆಯಾದರೂ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ. ನಗರದ ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುನ್ನೆಚ್ಚರಿಕೆ ಹಾಗೂ ನೈರ್ಮಲ್ಯದ ಕಡೆಗೆ ಜನತೆ ಹೆಚ್ಚಿನ ಗಮನ ನೀಡಬೇಕು ಎಂದು ವಿನಂತಿಸಿದರು. ಮಂಗಳೂರಿನ ಕುದ್ರೋಳಿ, ಅಳಕೆ ಮತ್ತು ಡೊಂಗರಕೇರಿ ಭಾಗಗಳಲ್ಲಿ ಹಳದಿ ರೋಗದ ಪ್ರಭಾವ ತುಸು ಹೆಚ್ಚಿದ್ದು, ಜೂನ್ 23ರಿಂದ ಈವರೆಗೆ 19 ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಇಲಾಖೆಯು ಈಗಾಗಲೇ 832 ಮನೆಗಳ ಸರ್ವೆ ನಡೆಸಿದ್ದು, ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದೆ.
ಚಾಲ್ತಿ ಸಾಲಿನ ಜನವರಿಯಿಂದ ಜೂನ್ವರೆಗಿನ ಅವಧಿಯಲ್ಲಿ ಜಿಲ್ಲಾದ್ಯಂತ ಒಟ್ಟು 35 ಹೆಪಟೈಟಿಸ್ ಎ ಮತ್ತು ಇ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಮಂಗಳೂರು ನಗರದಲ್ಲೇ ಗರಿಷ್ಠ 24 ಕೇಸ್ಗಳು ಕಂಡುಬಂದಿದ್ದು, ಉಳಿದಂತೆ ಪುತ್ತೂರಿನಲ್ಲಿ 6, ಬಂಟ್ವಾಳದಲ್ಲಿ 4 ಹಾಗೂ ಬೆಳ್ತಂಗಡಿಯಲ್ಲಿ 1 ಪ್ರಕರಣ ದಾಖಲಾಗಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಸೋಂಕಿನ ಪ್ರಮಾಣ ಕೊಂಚ ಏರಿಕೆಯಾಗಿದೆ. ಕಲುಷಿತ ನೀರು ಮತ್ತು ಆಹಾರದಿಂದ ಹರಡುವ ಈ ಸೋಂಕನ್ನು ಶುದ್ಧ ಕುಡಿಯುವ ನೀರು ಹಾಗೂ ವೈಯಕ್ತಿಕ ಸ್ವಚ್ಛತೆಯ ಮೂಲಕ ಸುಲಭವಾಗಿ ತಡೆಗಟ್ಟಬಹುದು ಎಂದು ಡಿಎಚ್ಒ ವಿವರಿಸಿದರು.
ಇದೇ ವೇಳೆ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ನವೀನ್ಚಂದ್ರ ಕುಲಾಲ್ ಅವರು ಡೆಂಗ್ ನಿಯಂತ್ರಣದ ಕುರಿತು ಮಾಹಿತಿ ಹಂಚಿಕೊಂಡರು. ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 27 ಡೆಂಗ್ ಪ್ರಕರಣಗಳು ಪತ್ತೆಯಾಗಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 9, ಬೆಳ್ತಂಗಡಿಯಲ್ಲಿ 8, ಬಂಟ್ವಾಳದಲ್ಲಿ 7 ಹಾಗೂ ಮಂಗಳೂರು ತಾಲೂಕಿನಲ್ಲಿ 3 ಪ್ರಕರಣಗಳು ವರದಿಯಾಗಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸದ್ಯಕ್ಕೆ ಪ್ರಕರಣಗಳು ನಿಯಂತ್ರಣದಲ್ಲಿದ್ದರೂ, ಮುಂದಿನ ದಿನಗಳಲ್ಲಿ ಮಳೆ ತೀವ್ರಗೊಂಡರೆ ಸೊಳ್ಳೆಗಳ ಸಂತತಿ ಹೆಚ್ಚಿ ಡೆಂಗ್ ವ್ಯಾಪಿಸುವ ಸಾಧ್ಯತೆ ಇದೆ. ಆದ್ದರಿಂದ ಆರಂಭಿಕ ಹಂತದಲ್ಲೇ ಜ್ವರದ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸದೆ ಸೂಕ್ತ ವಿಶ್ರಾಂತಿ ಮತ್ತು ದ್ರವಾಹಾರ ಸೇವಿಸಬೇಕು ಎಂದು ಅವರು ಎಚ್ಚರಿಸಿದರು.
ಜಿಲ್ಲೆಯ ವಿವಿಧ ಗ್ರಾಮೀಣ ಭಾಗಗಳ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳ ಭರ್ತಿಗೂ ಇಲಾಖೆ ಚಾಲನೆ ನೀಡಿದೆ. ಶಿರ್ತಾಡಿ, ನಾರಾವಿ, ಈಶ್ವರಮಂಗಲ, ಮಾಣಿ, ಐತ್ಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಉಪ್ಪಿನಂಗಡಿ, ಮೂಡುಬಿದಿರೆ ಹಾಗೂ ಕಡಬ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಿರಿಯ ವೈದ್ಯರ ಕೊರತೆಯಿದೆ. ಎಂಬಿಬಿಎಸ್ ಅರ್ಹತೆ ಹೊಂದಿರುವ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಇಲಾಖೆ ಸಿದ್ಧವಿದ್ದು, ಆಸಕ್ತರು ನೇರವಾಗಿ ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದರು. ಗೋಷ್ಠಿಯಲ್ಲಿ ಡಾ. ರಾಜೇಶ್, ಡಾ. ಸುದರ್ಶನ್, ಕೀಟಶಾಸ್ತ್ರಜ್ಞೆ ಮಂಜುಳಾ ಹಾಗೂ ಜ್ಯೋತಿ ಉಪಸ್ಥಿತರಿದ್ದರು.
ಇತ್ತೀಚೆಗೆ ಸಂಭವಿಸಿದ ಕಂಕನಾಡಿ-ನಾಗುರಿ ದುರಂತದ ಗಾಯಾಳುಗಳಿಗೆ ಆರೋಗ್ಯ ಇಲಾಖೆಯಿಂದ ಸಿಗುವ ವೈದ್ಯಕೀಯ ಪರಿಹಾರದ ವಿವರಗಳನ್ನೂ ಡಿಎಚ್ಒ ಇದೇ ಸಂದರ್ಭದಲ್ಲಿ ಪ್ರಕಟಿಸಿದರು. ಅಪಘಾತದಲ್ಲಿ ಗಾಯಗೊಂಡ ಇಬ್ಬರು ಮಕ್ಕಳ ಚಿಕಿತ್ಸೆಯ ವೆಚ್ಚಕ್ಕಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿ-ಎಆರ್ಕೆ) ಯೋಜನೆಯಡಿ 30 ಸಾವಿರ ರೂಪಾಯಿಗಳನ್ನು ಆಸ್ಪತ್ರೆಗೆ ಬಿಡುಗಡೆ ಮಾಡಲಾಗುತ್ತಿದೆ. ಇದರೊಂದಿಗೆ ತೀವ್ರ ಗಾಯಗೊಂಡಿರುವ ಬಾಲಕೃಷ್ಣ ಆಚಾರ್ಯ ಅವರ ಚಿಕಿತ್ಸೆಗಾಗಿ ಇಎಸ್ಐ ವತಿಯಿಂದ 63 ಸಾವಿರ ರೂ. ಹಾಗೂ ಎಬಿ-ಎಆರ್ಕೆ ವತಿಯಿಂದ 20 ಸಾವಿರ ರೂ. ನೆರವು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










