ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಮುಖಂಡರಾಗಿದ್ದ 78 ವರ್ಷದ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರು ಜೂನ್ 23ರ ಮಂಗಳವಾರದಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ, ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಹಿತೈಷಿಗಳು ಹಾಗೂ ಶಿಷ್ಯಂದಿರನ್ನು ಅಗಲಿದ್ದಾರೆ.
ಕಳೆದ 2010 ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಖಾಝಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದ ತ್ವಾಕಾ ಉಸ್ತಾದ್ ಅವರು, ಕರಾವಳಿ ಮತ್ತು ಕೇರಳ ಭಾಗದ ಸುಮಾರು ಇನ್ನೂರಕ್ಕೂ ಹೆಚ್ಚು ಜಮಾಅತ್ಗಳಿಗೆ ಧಾರ್ಮಿಕ ಮಾರ್ಗದರ್ಶಕರಾಗಿದ್ದರು. ಇದರೊಂದಿಗೆ ಸಮಸ್ತ ಕಾಸರಗೋಡು ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿಯೂ ಅವರು ಮಹತ್ವದ ಸೇವೆ ಸಲ್ಲಿಸಿದ್ದರು. ಸದ್ಯ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮಂಗಳೂರಿನ ಕೇಂದ್ರ ಜುಮಾ ಮಸೀದಿಯಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದ್ದು, ಅಂತಿಮ ವಿಧಿವಿಧಾನ ಹಾಗೂ ದಫನ ಕಾರ್ಯದ ಸಮಯ ಮತ್ತು ಸ್ಥಳವನ್ನು ಕುಟುಂಬಸ್ಥರ ಜೊತೆ ಸಮಾಲೋಚಿಸಿ ನಿರ್ಧರಿಸಲಾಗುವುದು ಎಂದು ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ತಿಳಿಸಿದ್ದಾರೆ.
ಮುಸ್ಲಿಯಾರ್ ನಿಧನಕ್ಕೆ ಐವನ್ ಡಿʼಸೋಜಾ ತೀವ್ರ ಸಂತಾಪ
ಮಂಗಳೂರಿನ ಕೇಂದ್ರ ಮಸೀದಿಯ ಖಾಜಿ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನಿಧನವು ಕೇವಲ ಮುಸ್ಲಿಂ ಸಮುದಾಯಕ್ಕಷ್ಟೇ ಅಲ್ಲ, ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಐವನ್ ಡಿ’ಸೋಜಾ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಸರ್ವಧರ್ಮ ಸಮಭಾವ, ಶಾಂತಿ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ತಮ್ಮ ಪ್ರವಚನಗಳು ಹಾಗೂ ಮಾರ್ಗದರ್ಶನದ ಮೂಲಕ ಸಮಾಜದಲ್ಲಿ ಸೌಹಾರ್ದತೆಯನ್ನು ಬೆಳೆಸುವ ಮಹತ್ತರ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದರು. ಪ್ರತಿಯೊಂದು ಹಬ್ಬದ ಸಂದರ್ಭದಲ್ಲಿಯೂ ಅವರನ್ನು ಭೇಟಿಯಾಗುವ ಅವಕಾಶ ನನಗೆ ದೊರೆಯುತ್ತಿತ್ತು. ಅವರ ಸಂದೇಶಗಳಲ್ಲಿ ಎಲ್ಲರೂ ಶಾಂತಿ ಮತ್ತು ನೆಮ್ಮದಿಯಿಂದ ಬದುಕಬೇಕು, ಪರಸ್ಪರ ಗೌರವ ಹಾಗೂ ಪ್ರೀತಿಯಿಂದ ವರ್ತಿಸಬೇಕು ಎಂಬ ಮೌಲ್ಯಗಳಿಗೆ ವಿಶೇಷ ಸ್ಥಾನವಿತ್ತು.
ಇತ್ತೀಚೆಗೆ ರಂಜಾನ್ ಹಾಗೂ ಬಕ್ರೀದ್ ಹಬ್ಬದ ಸಂದರ್ಭದಲ್ಲಿಯೂ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದ್ದೆ. ಆದರೆ ಅವರು ಇಷ್ಟು ಬೇಗ ನಮ್ಮನ್ನಗಲುತ್ತಾರೆ ಎಂದು ಊಹಿಸಿರಲಿಲ್ಲ. ಅವರ ಮಾರ್ಗದರ್ಶನ, ತತ್ವಗಳು ಮತ್ತು ಆದರ್ಶಗಳು ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ ಎಲ್ಲ ಸಮುದಾಯಗಳ ಜನರಿಗೂ ಪ್ರೇರಣೆಯಾಗಿದ್ದವು.
ಅವರ ಅಗಲಿಕೆಯಿಂದ ಉಂಟಾದ ಶೂನ್ಯವನ್ನು ತುಂಬುವುದು ಕಷ್ಟಸಾಧ್ಯ. ಪರಮಾತ್ಮನು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬದ ಸದಸ್ಯರು, ಬಂಧುಬಳಗ ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಐವನ್ ಡಿ’ಸೋಜಾ ಅವರು ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









