
ಉಳ್ಳಾಲ : ತೌಡುಗೋಳಿಯಲ್ಲಿರುವ ಪ್ರಸಿದ್ಧ ಶ್ರೀ ದುರ್ಗಾದೇವಿ ಕ್ಷೇತ್ರ, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಹಾಗೂ ಪರಿವಾರ ದೈವಗಳ ಸಾನಿಧ್ಯದ ಪುನರುತ್ಥಾನ ಕಾರ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಕ್ಷೇತ್ರದ ಆವರಣದಲ್ಲಿ ಆಯೋಜಿಸಲಾಗಿದ್ದ ಗಣ್ಯರ ಸಭೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಅಧಿಕೃತ ವಿಜ್ಞಾಪನಾ ಪತ್ರವನ್ನು ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮವನ್ನು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಗೋವಿಂದ ಗುರುಸ್ವಾಮಿಯವರು ಸಾಂಪ್ರದಾಯಿಕವಾಗಿ ದೀಪ ಬೆಳಗಿಸಿ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಈ ಭವ್ಯ ದೇವತಾ ಕಾರ್ಯವು ನಮ್ಮೆಲ್ಲರನ್ನೂ ಒಂದುಗೂಡಿಸುವ ಶಕ್ತಿಯಾಗಿದ್ದು, ಭಕ್ತರೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಜೊತೆಯಾಗಿ ಮಹಾತಾಯಿಗೆ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.
ಕ್ಷೇತ್ರದ ಅಭಿವೃದ್ಧಿಗೆ ಭಕ್ತರ ಸಹಭಾಗಿತ್ವದ ಅಗತ್ಯವನ್ನು ಒತ್ತಿಹೇಳಿದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಉಪನ್ಯಾಸಕ ಮುರಳೀಧರ ನಾಯ್ಕ್, ಪ್ರತಿಯೊಬ್ಬರೂ ಇದನ್ನು ತಮ್ಮ ಮನೆ ಕೆಲಸ ಎಂದು ಭಾವಿಸಿ ಸಮಯ ಮುಡುಪಾಗಿಟ್ಟರೆ ಪುನರ್ನಿರ್ಮಾಣ ಕಾರ್ಯವು ಅತ್ಯಂತ ಶೀಘ್ರವಾಗಿ ಪೂರ್ಣಗೊಳ್ಳಲಿದೆ ಎಂದು ಆಶಯ ವ್ಯಕ್ತಪಡಿಸಿದರು. ಸಮಿತಿಯ ಮಾರ್ಗದರ್ಶಕರಾದ ಮರಿಕಾಪು ಲಕ್ಷ್ಮೀನಾರಾಯಣ ಹೊಳ್ಳ ಅವರು ಮುಂಬರುವ ನಿಧಿ ಸಮರ್ಪಣಾ ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕೆಂದು ವಿನಂತಿಸಿದರು.
ಈ ಭವ್ಯ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ನಿರ್ದೇಶಕ ಕೆ.ಟಿ ಸುವರ್ಣ, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಅಡ್ಯಂತಾಯ, ಕೊಂಡೆಯೂರು ಅನಂತ ಪದ್ಮನಾಭ ದೇವಸ್ಥಾನದ ಮುಖ್ಯಸ್ಥ ಸೋಮನಾಥ ಕಾರಂತ ಮರಿಕಾಪು, ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷ ಗಿರೀಶ್ ಆಳ್ವ ಗರೋಡಿ ಹಾಗೂ ಪ್ರಮುಖರಾದ ಇಳಾ ಶಂಕರ್ ಭಟ್, ಪ್ರಸನ್ನ ಪಕ್ಕಳ ಬಲೆತೋಡು, ಹರೀಶ್ ಇರಾ, ಹಿರಿಯ ಪತ್ರಕರ್ತ ಜಗನ್ನಾಥ ಶೆಟ್ಟಿ ಪಾವುಲ, ಪ್ರಭಾಕರ ರೈ ಕಲ್ಪನೆ, ಹರೀಶ್ ಕನ್ನಿಗುಳಿ, ನವೀನ್ ಶೆಟ್ಟಿ ಮಂಗಲಪಾಡಿ ಮತ್ತು ದಿನೇಶ್ ಕೊಂದಲ ಕುಮೇರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಕ್ಷೇತ್ರದ ಪ್ರಮುಖರಾದ ಕಿಶೋರ್ ನಾಯ್ಕ್ ವರ್ಕಾಡಿ, ಆನಂದ ಆಚಾರಿ, ಶಶಿಧರ್ ನಾಯ್ಕ್ ಬಜಿಲಕರಿಯ, ರಮೇಶ್ ಮೋರ್ಲ, ಶಶಿಕಿರಣ್ ಬೋಳ, ಜಿತೇಶ್ ಶೆಟ್ಟಿ ಪೂಂಜರಮನೆ, ಆನಂದ ಬೆಲ್ಚಡ ನೀರೊಳಿಕೆ, ಪುನೀತ್ ಶೆಟ್ಟಿ, ಶೇಕರ ತೋಕೆ ಹಾಗೂ ಮಹಿಳಾ ಮುಖಂಡರಾದ ಪ್ರತಿಭಾ ದಿನೇಶ್, ರೇಷ್ಮಾ ಜಯಪ್ರಕಾಶ್ ಶೆಟ್ಟಿ, ಲಲಿತಾ ಶಾಂತಿಪಲಿಕೆ ಮತ್ತು ಚಿತ್ರ ಮುಡೂರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಆರಂಭದಲ್ಲಿ ಶಿವಪ್ರಸಾದ್ ತೌಡುಗೋಳಿ ಎಲ್ಲರನ್ನೂ ಸ್ವಾಗತಿಸಿದರೆ, ಶಿವರಾಜ್ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










