ಜಾಗತಿಕ ಮಟ್ಟದಲ್ಲಿ ತೀವ್ರ ಸಂಘರ್ಷಕ್ಕೆ ಕಾರಣವಾಗಿರುವ ಹಾರ್ಮುಝ್ ಜಲಸಂಧಿಯ ಒಮನ್ ಕರಾವಳಿ ಭಾಗದಲ್ಲಿ ಸಂಚರಿಸುತ್ತಿದ್ದ ವಾಣಿಜ್ಯ ಹಡಗೊಂದರ ಮೇಲೆ ಇರಾನ್ ಪಡೆಗಳು ಭೀಕರ ಕ್ಷಿಪಣಿ ದಾಳಿ ನಡೆಸಿವೆ. ಈ ನಡುಸಮುದ್ರದ ದಾಳಿಯ ವೇಳೆ ಹಡಗಿನಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ನಿವಾಸಿ ರಚನ್ ಆರ್.ಕೆ. ಸೇರಿದಂತೆ ಒಟ್ಟು 10 ಮಂದಿ ಭಾರತೀಯ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಬದುಕುಳಿದಿದ್ದಾರೆ. ಅಪಾಯಕ್ಕೆ ಸಿಲುಕಿದ್ದ ಭಾರತೀಯ ನಾವಿಕರನ್ನು ಒಮನ್ ನೌಕಾಪಡೆಯು ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ರಕ್ಷಿಸಿದ್ದು, ಪ್ರಸ್ತುತ ರಚನ್ ಅವರು ಸುರಕ್ಷಿತವಾಗಿ ದುಬೈಗೆ ತಲುಪಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕಾರ್ಗೋ ಶಿಪ್ಪಿಂಗ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ರಚನ್ ಆರ್.ಕೆ. ಅವರು ಶನಿವಾರ ಹಡಗಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಘಟನೆಯ ಕುರಿತು ಬಂಟ್ವಾಳದಲ್ಲಿರುವ ತಂದೆ ರೋಹಿತಾಕ್ಷ ಬಾಣಬೆಟ್ಟು ಅವರಿಗೆ ಆಡಿಯೋ ಸಂದೇಶ ಕಳುಹಿಸಿರುವ ರಚನ್, ಆ ಕರಾಳ ರಾತ್ರಿಯ ಭಯಾನಕ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಹಡಗಿನ ಮೇಲೆ ದಾಳಿಯಾಗುವ ಮುನ್ಸೂಚನೆ ಮೊದಲೇ ಸಿಕ್ಕಿತ್ತಾದರೂ, ಶನಿವಾರ ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಇರಾನ್ ಉಡಾಯಿಸಿದ ಕ್ಷಿಪಣಿಯೊಂದು ನೇರವಾಗಿ ಬಂದು ಹಡಗಿಗೆ ಅಪ್ಪಳಿಸಿತು. ತಕ್ಷಣವೇ ಇಂಜಿನ್ ಕೊಠಡಿಯಲ್ಲಿ ಭಾರಿ ಪ್ರಮಾಣದ ಬೆಂಕಿ ಹೊತ್ತಿಕೊಂಡಿತು ಎಂದು ಅವರು ವಿವರಿಸಿದ್ದಾರೆ.
ಮಧ್ಯರಾತ್ರಿ ಇಂಜಿನ್ ರೂಮ್ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ನಿದ್ರೆಯಲ್ಲಿದ್ದ ಸಿಬ್ಬಂದಿಯೆಲ್ಲರೂ ಗಾಬರಿಯಿಂದ ಹೊರಗೆ ಓಡಿಬಂದಿದ್ದಾರೆ. ಕ್ಷಣಕ್ಷಣಕ್ಕೂ ಹಡಗು ಮುಳುಗುವ ಸ್ಥಿತಿ ತಲುಪಿದ್ದರಿಂದ, ಬದುಕಲು ಬೇರೆ ದಾರಿಯಿಲ್ಲದೆ ಎಲ್ಲರೂ ಲೈಫ್ ಬೋಟ್ ಸಹಾಯದಿಂದ ಸಮುದ್ರಕ್ಕೆ ಧುಮುಕಿದ್ದಾರೆ. ಈ ಆತಂಕದ ಪರಿಸ್ಥಿತಿಯ ನಡುವೆ ಪುಣೆ ಮೂಲದ ಸಹೋದ್ಯೋಗಿಯೊಬ್ಬರು ಸಮುದ್ರದ ಅಲೆಗಳ ಮಧ್ಯೆ ನಾಪತ್ತೆಯಾಗಿದ್ದಾರೆ. ಆದರೆ ಅದೃಷ್ಟವಶಾತ್, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಒಮನ್ ನೌಕಾಪಡೆಯು ಇವರನ್ನು ರಕ್ಷಿಸಿ, ತನ್ನ ಸೇನಾ ನೆಲೆಗೆ ಕರೆದೊಯ್ದು ಸೂಕ್ತ ಆಶ್ರಯ ಮತ್ತು ರಕ್ಷಣೆ ನೀಡಿದೆ.
ಮಗ ಸಿಲುಕಿದ್ದ ಕಡಲ ಕಂಟಕದ ಬಗ್ಗೆ ಮಾಧ್ಯಮಗಳೊಂದಿಗೆ ಆತಂಕ ಹಂಚಿಕೊಂಡ ತಂದೆ ರೋಹಿತಾಕ್ಷ ಬಾಣಬೆಟ್ಟು, ಮಧ್ಯಪ್ರಾಚ್ಯದ ಪ್ರಸ್ತುತ ಯುದ್ಧದ ವಾತಾವರಣದಿಂದ ನಾವು ಮೊದಲೇ ಆತಂಕದಲ್ಲಿದ್ದೆವು. ಮಗನಿದ್ದ ಹಡಗಿನ ಮೇಲೆ ಮಿಸೈಲ್ ದಾಳಿಯಾದ ಸುದ್ದಿ ತಿಳಿದಾಗ ನಮ್ಮ ಇಡೀ ಕುಟುಂಬವೇ ಕಣ್ಣೀರು ಹಾಕಿತ್ತು. ಆದರೆ, ಒಮನ್ ಸೇನೆಯ ಸಕಾಲಿಕ ನೆರವು ಹಾಗೂ ದೈವಕೃಪೆಯಿಂದ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತಾನು ಸುರಕ್ಷಿತವಾಗಿದ್ದು ದುಬೈಗೆ ಪ್ರಯಾಣ ಬೆಳೆಸಿರುವುದಾಗಿ ಆತನೇ ಫೋನ್ ಮಾಡಿ ತಿಳಿಸಿದಾಗ ನಮ್ಮ ಜೀವ ಮರಳಿ ಬಂದಂತಾಯಿತು ಎಂದು ನಿರಾಳತೆ ವ್ಯಕ್ತಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










