ಬಂಟ್ವಾಳ : ಬಿ.ಸಿ. ರೋಡ್ನಲ್ಲಿ ನಡೆದ ಯುವತಿಯ ದಾರುಣ ಕೊಲೆ ಕೃತ್ಯವನ್ನು ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅತ್ಯುಗ್ರವಾಗಿ ಖಂಡಿಸಿದೆ. ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ (ನಗರ ವಿಭಾಗ) ಅಧ್ಯಕ್ಷೆ ಎಸ್. ಅಪ್ಪಿ ಅವರು, ಕೊಲೆಗಡುಕ ಆರೋಪಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗದ ರೀತಿಯಲ್ಲಿ ಪೋಲಿಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರಬಲವಾಗಿ ಒತ್ತಾಯಿಸಿದರು. ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಸೂಕ್ತ ರಕ್ಷಣೆ ಸಿಗದ ವಾತಾವರಣ ನಿರ್ಮಾಣವಾಗುತ್ತಿದ್ದು, ಇದು ಪ್ರತಿಯೊಬ್ಬರಲ್ಲೂ ತೀವ್ರ ಭಯ ಹಾಗೂ ಆತಂಕವನ್ನು ಉಂಟುಮಾಡಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ದೇಶವನ್ನು ಉನ್ನತ ಎತ್ತರಕ್ಕೆ ಕೊಂಡೊಯ್ಯಬೇಕಾದ ಯುವ ಸಮುದಾಯವು ಇಂತಹ ಘೋರ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಮಾಜದ ಮಾನವೀಯ ಮೌಲ್ಯಗಳ ಕುಸಿತಕ್ಕೆ ಉದಾಹರಣೆಯಾಗಿದೆ. ಹೆಣ್ಣುಮಕ್ಕಳ ಮೇಲಿನ ನಿರಂತರ ದೌರ್ಜನ್ಯ, ಹಿಂಸಾಚಾರ ಹಾಗೂ ಸಾಮಾಜಿಕ ಅಸಮಾನತೆಯು ಸಮಾಜವನ್ನು ಕಂಗೆಡಿಸಿದೆ. ಯುವಜನತೆ ತಪ್ಪು ಹಾದಿ ತುಳಿಯಲು ಕಾರಣವೇನು, ಹೆತ್ತವರಿಗೆ ಇವರು ನೀಡುತ್ತಿರುವ ಸಂದೇಶವೇನು ಹಾಗೂ ಈ ಹತ್ಯೆಗಳ ಹಿಂದೆ ಕೆಲಸ ಮಾಡುತ್ತಿರುವ ಕಾಣದ ಕೈಗಳು ಅಥವಾ ಪ್ರಚೋದಕ ಶಕ್ತಿಗಳು ಯಾವುವು ಎಂಬುದರ ಕುರಿತು ಆಳವಾದ ತನಿಖೆಯಾಗಬೇಕಿದೆ ಎಂದು ಅವರು ಹೇಳಿದರು.
ಭವಿಷ್ಯದಲ್ಲಿ ಇಂತಹ ಕೃತ್ಯಗಳು ಮರುಕಳಿಸದಂತೆ ಕಾನೂನು ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಸಾರ್ವಜನಿಕ ಸ್ಥಳಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ತಕ್ಷಣವೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಸುರಕ್ಷತೆಯನ್ನು ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದರು. ಇಂತಹ ಭೀಕರ ಘಟನೆಗಳು ಸಂಭವಿಸುವಾಗ ಸಾರ್ವಜನಿಕರು ಕೇವಲ ಮೊಬೈಲ್ಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ನಿಲ್ಲದೆ, ಸಂಕಷ್ಟದಲ್ಲಿರುವವರನ್ನು ರಕ್ಷಿಸಲು ಧಾವಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಕೊಲೆಯಾದ ಯುವತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಧನ ಒದಗಿಸುವಂತೆ ಮುಖ್ಯಮಂತ್ರಿಗಳನ್ನು ಕೋರುವುದಾಗಿ ತಿಳಿಸಿದರು. ಈ ಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಮುಖಂಡರಾದ ವೀಣಾ ಬೆನೆಡಿಕ್ಟ್, ಗೀತಾ ಪ್ರವೀಣ್, ಕಲಾ ಜ್ಯೋತಿ, ವೃಂದಾ, ಶಾಂತಲಾ ಗಟ್ಟಿ ಹಾಗೂ ಚಂಚಲಾಕ್ಷಿ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










