ಮಂಗಳೂರು : ಅಯೋಧ್ಯೆ ರಾಮಮಂದಿರದ ಹುಂಡಿ ಹಣ ಹಾಗೂ ಕಾಣಿಕೆ ಕಳವು ಪ್ರಕರಣ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿ ಇರುವ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ತಕ್ಷಣವೇ ವಜಾಗೊಳಿಸಬೇಕು ಮತ್ತು ಸುಪ್ರೀಂ ಕೋರ್ಟ್ನ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರ ನೇರ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆಗ್ರಹಿಸಿದ್ದಾರೆ. ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಮುಖಂಡರಾದ ಶ್ರೀ ಶಂಕರಾಚಾರ್ಯ ಸ್ವಾಮೀಜಿಗಳು, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ನಿಷ್ಠಾವಂತ ಭಕ್ತರನ್ನು ಒಳಗೊಂಡ ನೂತನ ಪಾರದರ್ಶಕ ಟ್ರಸ್ಟ್ ಅನ್ನು ಮರುರಚಿಸಬೇಕು ಎಂದು ಒತ್ತಾಯಿಸಿದರು.
ಆರ್ಎಸ್ಎಸ್, ವಿಎಚ್ಪಿ ಮತ್ತು ಬಿಜೆಪಿ ನಾಯಕರು ಸೇರಿಕೊಂಡು ಕೋಟ್ಯಂತರ ಹಿಂದೂಗಳ ಧಾರ್ಮಿಕ ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದ ಸೊರಕೆ, ಇಷ್ಟೊಂದು ದೊಡ್ಡ ಹಗರಣ ನಡೆದಿದ್ದರೂ ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ (ಐಟಿ) ಹಾಗೂ ಸಿಬಿಐ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು. ದೇಶದ ಚೌಕಿದಾರ್ ಎಂದು ಕರೆದುಕೊಳ್ಳುವ ಪ್ರಧಾನಮಂತ್ರಿಯವರು ನೇಮಿಸಿದ ಟ್ರಸ್ಟಿಗಳೇ ಇಲ್ಲಿ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಈ ಕಳವು ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಧ್ವನಿ ಎತ್ತುತ್ತಿಲ್ಲ ಎಂದು ಟೀಕಿಸಿದರು. 1989 ರಿಂದಲೂ ರಾಮನ ಹೆಸರನ್ನು ಕೇವಲ ರಾಜಕೀಯ ಹಾಗೂ ಚುನಾವಣಾ ಲಾಭಕ್ಕಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ. ಪುತ್ತೂರಿನಲ್ಲಿಯೂ ಇಟ್ಟಿಗೆಗಳನ್ನು ಮನೆಮನೆಗೆ ಕೊಂಡೊಯ್ದು ಪೂಜೆ ನಡೆಸಿ ಹಣ ವಸೂಲಿ ಮಾಡಿದ್ದರು, ಆದರೆ ಅಂದು ಜನತೆ ತಮಗೆ ಜಯ ತಂದುಕೊಟ್ಟಿದ್ದರು ಎಂಬುದನ್ನು ಸ್ಮರಿಸಿದ ಅವರು, ರಾಮಮಂದಿರ ವಿವಾದ ನ್ಯಾಯಾಲಯದಲ್ಲೇ ಬಗೆಹರಿಯಬೇಕು ಎಂಬುದು ಆರಂಭದಿಂದಲೂ ಕಾಂಗ್ರೆಸ್ ನಿಲುವಾಗಿತ್ತು ಎಂದು ಸ್ಪಷ್ಟಪಡಿಸಿದರು.
ದೇವಸ್ಥಾನಕ್ಕೆ ಸಂಬಂಧಿಸಿದ ಜಮೀನು ಮಾರಾಟ ಪ್ರಕ್ರಿಯೆಯಲ್ಲೂ ಟ್ರಸ್ಟ್ ಸದಸ್ಯರು ಒಳಒಪ್ಪಂದ ಮಾಡಿಕೊಂಡು ಅವ್ಯವಹಾರ ನಡೆಸಿರುವುದು ಈಗಾಗಲೇ ಬಹಿರಂಗವಾಗಿದೆ. ಈಗ ಭಕ್ತರು ಭಕ್ತಿಯಿಂದ ಅರ್ಪಿಸಿದ ಕಾಣಿಕೆಯನ್ನೂ ಲೂಟಿ ಮಾಡಲಾಗಿದೆ. ಈ ಕಳುವಾದ ಚಿನ್ನಾಭರಣಗಳನ್ನು ಕರ್ನಾಟಕಕ್ಕೆ ತಂದು ಕರಗಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಕರಾವಳಿ ಭಾಗದ ಜನತೆ ಅನಾದಿ ಕಾಲದಿಂದಲೂ ರಾಮದೇವರನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾ ಬಂದಿದ್ದಾರೆ. ಆದರೆ ಬಿಜೆಪಿ ಮಾತ್ರ ದೇವರ ಹೆಸರಿನಲ್ಲಿ ನಿರಂತರವಾಗಿ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಸೊರಕೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಮಾತನಾಡಿದ ಪ್ರಚಾರ ಸಮಿತಿಯ ಉಪಾಧ್ಯಕ್ಷ ಸುಧೀರ್ ಕುಮಾರ್ ಮರೋಳಿ ಅವರು, ಈ ಕಾಣಿಕೆ ದರೋಡೆ ಪ್ರಕರಣಕ್ಕೂ ಪ್ರಧಾನಿ ಕಾರ್ಯಾಲಯಕ್ಕೂ (PMO) ನೇರ ನಂಟಿದೆ ಎಂದು ಗಂಭೀರ ಆರೋಪ ಮಾಡಿದರು. ಟ್ರಸ್ಟ್ನಲ್ಲಿ ಅಧಿಕಾರದಲ್ಲಿದ್ದವರೆಲ್ಲರೂ ಆಡಳಿತಾರೂಢ ಬಿಜೆಪಿ ಹಾಗೂ ಸಂಘ ಪರಿವಾರದ ಹಿನ್ನೆಲೆಯುಳ್ಳವರಾಗಿದ್ದು, ಇವರೆಲ್ಲರೂ ಸೇರಿ ದೇವರ ನಗದು, ಚಿನ್ನ ಹಾಗೂ ಬೆಳ್ಳಿಯನ್ನು ದೋಚಿದ್ದಾರೆ. ಈ ಹಿಂದೆ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಮೋದಿಯವರನ್ನು ದೇವರಿಗೆ ಹೋಲಿಸಿದ್ದರು. ಪ್ರಸ್ತುತ ಉತ್ತರ ಪ್ರದೇಶ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (SIT) ನೈಜ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬುಲ್ಡೋಜರ್ಗಳು ಈಗ ಯಾಕೆ ಸುಮ್ಮನಿವೆ? ಅದಕ್ಕೆ ಇಂಧನ ಕೊರತೆಯಾಗಿದೆಯೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷವು ಎಂದಿಗೂ ಶ್ರೀರಾಮನ ಅಸ್ತಿತ್ವವನ್ನು ವಿರೋಧಿಸಿಲ್ಲ, ಆದರೆ ಬಿಜೆಪಿಯವರು ತಮ್ಮ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಅನ್ನು ರಾಮ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಮಹತ್ವದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಪ್ರಮುಖ ಮುಖಂಡರುಗಳಾದ ಶಾಲೆಟ್ ಪಿಂಟೋ, ಶಶಿಧರ ಹೆಗ್ಡೆ, ಮಹಮ್ಮದಾಲಿ, ಸುಭಾಶ್ಚಂದ್ರ ಶೆಟ್ಟಿ, ಟಿ.ಕೆ. ಸುಧೀರ್, ಶುಭೋದಯ ಆಳ್ವ ಹಾಗೂ ಅಬ್ದುಲ್ ಸಲೀಂ, ಚೇತನ್ ಬೆಂಗ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










