
ಮಂಗಳೂರು : ʼಕೊಂಕಣಿ ಭಾಷೆಗೆ ಒಂದು ದೀರ್ಘ ಉಸಿರಿದ್ದು, ಅರಬ್ಬಿ ಸಮುದ್ರದ ಅಲೆಗಳಲ್ಲೇ ಕೊಂಕಣಿಯ ಘರ್ಜನೆ ಮೊಳಗುತ್ತಿದೆ. ಪಶ್ಚಿಮ ಕರಾವಳಿಯುದ್ದಕ್ಕೂ ಕೊಂಕಣಿ ಭಾಷೆಯು ತನ್ನ ಪರಿಮಳವನ್ನು ಹರಡುತ್ತಿದೆ. ಇಂತಹ ಭಾಷೆಯಲ್ಲಿ ಕೊಂಕಣಿ “ಸಬ್ದಾಂ ಸಂಪತ್ತಿ” ಶಬ್ದಕೋಶವು ಒಂದು ಅದ್ಭುತ ಮೈಲಿಗಲ್ಲು ಆಗುವುದರಲ್ಲಿ ಯಾವುದೇ ಸಂಶಯವಿಲ್ಲʼ ಎಂದು ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ.ಸ್ವಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ಜುಲೈ 21 ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮುದ್ರಿಸಿದ ಫಾ. ಪ್ರಶಾಂತ್ ಮಾಡ್ತ ಸಂಪಾದಿತ “ಸಬ್ದಾಂ ಸಂಪತ್ತಿ” ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾದ, ಶ್ರೀ ಪಿ.ವಿ. ಮೋಹನ್ರವರು ಮಾತನಾಡಿ ʼ ಶಬ್ದ ಎನ್ನುವುದು ಜಗತ್ತಿನ ಮೂಲ ಸತ್ಯ, ಶಬ್ದ ಒಂದು ಮಹಾನ್ ಆವಿಷ್ಕಾರ. ಆ ಶಬ್ದವನ್ನು ಸಂಪಾದಿಸಿ ಸಮಾನಾರ್ಥಕಗಳು, ವಿರುದ್ದಾರ್ಥಕಗಳನ್ನು ರಚಿಸುವುದು ನಿಜವಾಗಿಯೂ ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಸಂಪಾದಕರು ಹಾಗೂ ಅಕಾಡೆಮಿಯು ಸಾಕಷ್ಟು ಶ್ರಮ ವಹಿಸಿದೆ. ಅದಕ್ಕಾಗಿ ಅಕಾಡೆಮಿಯ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆʼ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಮಾತನಾಡಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ದಿಗೆ ಸಾಕಷ್ಟು ಶ್ರಮಿಸುತ್ತಿದ್ದು, ಇನ್ನೂ ಹಲವು ಪುಸ್ತಕಗಳು ಮುದ್ರಣದ ಹಂತದಲ್ಲಿವೆ. ಅಕಾಡೆಮಿ ಮುದ್ರಿತ ʼಕಾವ್ಯ ಪಲ್ಲವಿʼ ಮತ್ತು ʼಕಥಾ ಪಲ್ಲವಿʼ ಎಂಬ ಕೊಂಕಣಿಯಿಂದ ಕನ್ನಡಕ್ಕೆ ಭಾಷಾಂತರಗೊಂಡ ಕೃತಿಗಳ ಮೂಲಕ ಕೊಂಕಣಿ ಸಾಹಿತ್ಯವನ್ನು ಕನ್ನಡ ಭಾಷೆಗೆ ಪರಿಚಯಿಸುವ ಕೆಲಸವನ್ನು ಅಕಾಡೆಮಿಯ ಮಾಡುತ್ತಿದೆ. ಕೊಂಕಣಿ ಸಾಹಿತಿಗಳನ್ನು ಹಾಗೂ ಸಾಹಿತ್ಯವನ್ನು ಇತರ ಭಾಷಿಗರಿಗೆ ಪರಿಚಯಿಸುವ ಕೆಲಸಕ್ಕೆ ಅಕಾಡೆಮಿಯು ಬದ್ದವಾಗಿದೆ. ಈ ಕೆಲಸದಲ್ಲಿ ಕೊಂಕಣಿ ಸಾಹಿತಿಗಳು ಹಾಗೂ ಕವಿಗಳು ತಮ್ಮ ಸಂಪೂರ್ಣ ಬೆಂಬಲವನ್ನು ಅಕಾಡೆಮಿಗೆ ನೀಡಬೇಕೆಂದು ಕರೆ ಕೊಟ್ಟರು.
ವೇದಿಕೆಯಲ್ಲಿ ಗೌರವ ಅತಿಥಿಗಳಾಗಿ ಅಲೋಶಿಯಸ್ ವಿದ್ಯಾಸಂಸ್ಥೆಗಳ ರೆಕ್ಟರ್ ಫಾ.ಬ್ರಾಯನ್ ಪಿರೇರಾ, ಕುಲಪತಿಗಳಾದ ಫಾ. ಡಾ. ಪ್ರವೀಣ್ ಮಾರ್ಟಿಸ್, ತುಳು ಅಕಾಡೆಮಿಯ ಅಧ್ಯಕ್ಷರಾದ ತಾರನಾಥ ಗಟ್ಟಿಯವರು ಉಪಸ್ಥಿತರಿದ್ದರು.
ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ ಜಿ. ಸ್ವಾಗತಿಸಿ, ಫಾ.ಪ್ರಶಾಂತ್ ಮಾಡ್ತರವರು ಪ್ರಸ್ತಾವನೆಗೈದರು. ರೋಶನ್ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿ, ಫ್ಲೋರಾ ಕ್ಯಾಸ್ತಲಿನೊರವರು ವಂದಿಸಿದರು. ಈ ಕಾರ್ಯಕ್ರಮಕ್ಕೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯವು ಸಹಯೋಗವನ್ನು ನೀಡಿತ್ತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು










