ಮಂಗಳೂರು: ಮಳೆಗಾಲದ ಸಂದರ್ಭದಲ್ಲಿ ಸಂಭವಿಸುವ ತೀವ್ರ ಮಣ್ಣಿನ ಕೊರೆತವನ್ನು ನಿಯಂತ್ರಿಸುವ ಉದ್ದೇಶದಿಂದ, ನವಮಂಗಳೂರು ಬಂದರು ಪ್ರಾಧಿಕಾರದ (ಎನ್ಎಂಪಿಎ) ಸಿಐಎಸ್ಎಫ್ ಘಟಕದ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪವಿರುವ ನಂದಿನಿ ನದಿ ತೀರದಲ್ಲಿ ಅಂದಾಜು 3,000 ಲಾವಂಚ (ಖಸ್/Vetiver) ಸಸಿಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.
ರಾಷ್ಟ್ರದ ಪ್ರಮುಖ ಮೂಲಸೌಕರ್ಯಗಳ ರಕ್ಷಣೆಯೊಂದಿಗೆ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಿರುವ ಸಿಐಎಸ್ಎಫ್, ಮಹಾನಿರ್ದೇಶಕ ಪ್ರವೀರ್ ರಂಜನ್ ಅವರ ಮಾರ್ಗದರ್ಶನದಲ್ಲಿ 2026ರ ಆಗಸ್ಟ್ನಿಂದ ರಾಷ್ಟ್ರವ್ಯಾಪಿ ‘ಲಾವಂಚ ನಾಟಿ ಅಭಿಯಾನ’ವನ್ನು ಮುನ್ನಡೆಸುತ್ತಿದೆ. ಮಣ್ಣಿನ ಸವಕಳಿ ತಡೆ, ಭೂಕುಸಿತ ನಿಯಂತ್ರಣ ಹಾಗೂ ಅಂತರ್ಜಲ ಮಟ್ಟ ವೃದ್ಧಿಗೆ ಲಾವಂಚ ಹುಲ್ಲು ಅತ್ಯಂತ ಉಪಯುಕ್ತವಾಗಿದೆ. ಈ ಸಸ್ಯದ ಬೇರುಗಳು ಭೂಮಿಯ ಆಳಕ್ಕೆ ಸುಮಾರು 3 ರಿಂದ 4 ಮೀಟರ್ಗಳಷ್ಟು ನೇರವಾಗಿ ಇಳಿದು ಮಣ್ಣನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತವೆ. ವಿಶೇಷವೆಂದರೆ, ಒಂದು ಲಕ್ಷ ಲಾವಂಚ ಸಸಿಗಳು ಕೇವಲ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 20,000 ಪೂರ್ಣ ಬೆಳೆದ ಮರಗಳಿಗೆ ಸಮನಾಗಿ ಇಂಗಾಲವನ್ನು ಹೀರಿಕೊಳ್ಳುವ ಮತ್ತು ತಂಪಾದ ವಾತಾವರಣ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿವೆ.
ಕೇಂದ್ರ ಸರ್ಕಾರದ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನಕ್ಕೆ ಬೆಂಬಲವಾಗಿ ಆಯೋಜಿಸಲಾಗಿದ್ದ ಈ ಪರಿಸರ ಸ್ನೇಹಿ ಕಾರ್ಯಕ್ರಮದಲ್ಲಿ ಕಟೀಲು ದೇಗುಲದ ಅನುವಂಶಿಕ ಮೊಕ್ತೇಸರ ಹರಿನಾರಾಯಣ ಆಸ್ರಣ್ಣ, ಪಿಲಿಕುಳ ನಿಸರ್ಗಧಾಮದ ಔಷಧೀಯ ಸಸ್ಯೋದ್ಯಾನದ ಅಧಿಕಾರಿ ಉದಯ ಕುಮಾರ್ ಶೆಟ್ಟಿ ಹಾಗೂ ಎನ್ಎಂಪಿಎ ಸಿಐಎಸ್ಎಫ್ ಉಪ ಕಮಾಂಡೆಂಟ್ ಆರ್.ಪಿ. ಪಾಠಕ್ ಪಾಲ್ಗೊಂಡಿದ್ದರು. ಸಿಐಎಸ್ಎಫ್ ಯೋಧರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಸ್ಥಳೀಯ ನಾಗರಿಕರು ಸೇರಿದಂತೆ ಸುಮಾರು 60 ಮಂದಿ ಉತ್ಸಾಹದಿಂದ ಸಸಿ ನೆಡುವ ಕಾರ್ಯದಲ್ಲಿ ಕೈಜೋಡಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









