ಮಂಗಳೂರು: ದಾನಿಗಳ ಉದಾರ ಸಹಕಾರದಿಂದ ಇಂದು ಒಕ್ಕೂಟವು ಬಲಿಷ್ಠವಾಗಿ ನೆಲೆಯೂರಿದ್ದು, ಮುಂದಿನ ದಿನಗಳಲ್ಲಿ ಕಲಾವಿದರಿಗೆ ಮತ್ತಷ್ಟು ಆಸರೆಯಾಗಿ ಬೆಳೆಯಬೇಕಿದೆ. ಸ್ಥಳೀಯ ಹಾಗೂ ವಲಯ ಮಟ್ಟದಲ್ಲಿ ಸಂಘಟನಾತ್ಮಕವಾಗಿ ಇನ್ನಷ್ಟು ಸದೃಢವಾಗಲು ಎಲ್ಲಾ ಸದಸ್ಯರ ಸಕ್ರಿಯ ಪ್ರೋತ್ಸಾಹ ಅತ್ಯಗತ್ಯ ಎಂದು ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಅಭಿಪ್ರಾಯಪಟ್ಟರು.
ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಆಯೋಜಿಸಲಾಗಿದ್ದ ತುಳು ನಾಟಕ ಕಲಾವಿದರ ಒಕ್ಕೂಟದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾಸಭೆಯಲ್ಲಿ ಜಿಲ್ಲೆಯಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣ, ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ, ಕಲಾವಿದರ ಮಾಸಾಶನ ಹೆಚ್ಚಳ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದು, ಪಟ್ಲ ಫೌಂಡೇಷನ್ ಉಚಿತ ವಿಮಾ ಯೋಜನೆ ಹಾಗೂ ವಲಯ ಮಟ್ಟದ ಘಟಕಗಳನ್ನು ಇನ್ನಷ್ಟು ಬಲಪಡಿಸುವ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಕೋಶಾಧಿಕಾರಿ ಮೋಹನ್ ಕೊಪ್ಪಳ ಕದ್ರಿ ಅವರು 2025-26ನೇ ಸಾಲಿನ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು. ಇದೇ ವೇಳೆ, ಒಕ್ಕೂಟದ ಆಜೀವ ಸದಸ್ಯತ್ವ ಶುಲ್ಕವನ್ನು ₹500ರಿಂದ ₹1,000ಕ್ಕೆ ಏರಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಮಾನವೀಯ ನೆಲೆಯಲ್ಲಿ, ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ಪುತ್ತೂರಿನ ಸದಸ್ಯ ರೋಹಿತ್ ಅವರಿಗೆ ಒಕ್ಕೂಟದ ವತಿಯಿಂದ ₹10,000 ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ಸಂಘಟನೆಯ ಅಭಿವೃದ್ಧಿಗೆ ಹಲವು ರಚನಾತ್ಮಕ ಸಲಹೆಗಳನ್ನು ನೀಡಿದರು.
ಸಮಾರಂಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಗೋಕುಲ್ ಕದ್ರಿ ಮತ್ತು ತಾರಾನಾಥ ಶೆಟ್ಟಿ, ಕ್ಷೇಮ ನಿಧಿ ಸಂಚಾಲಕ ರಾಘವೇಂದ್ರ ರಾವ್ ಶರವು ಹಾಗೂ ಪ್ರಧಾನ ಸಂಚಾಲಕ ಪ್ರದೀಪ್ ಆಳ್ವ ಕದ್ರಿ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಜೊತೆ ಕಾರ್ಯದರ್ಶಿ ವಿನಾಯಕ ಜೆಪ್ಪು ಅವರು 2024-25ನೇ ಸಾಲಿನ ಮಹಾಸಭೆಯ ವರದಿಯನ್ನು ವಾಚಿಸಿದರೆ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಮಾರ್ ಮಲ್ಲೂರು ವಾರ್ಷಿಕ ವರದಿಯನ್ನು ಮಂಡಿಸಿ ಕಾರ್ಯಕ್ರಮ ನಿರೂಪಿಸಿದರು. ಅಂತಿಮವಾಗಿ ಕ್ಷೇಮ ನಿಧಿ ಪ್ರಧಾನ ಸಂಚಾಲಕ ಪ್ರದೀಪ್ ಆಳ್ವ ಕದ್ರಿ ವಂದನಾರ್ಪಣೆ ಸಲ್ಲಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಸಂಕ್ಷಿಪ್ತ ಸುದ್ದಿಗಳು, ಸುದ್ದಿಗಳು









