ಬೆಂಗಳೂರು : ವರಮಹಾಲಕ್ಷ್ಮಿ ಹಬ್ಬದಂತಹ ಸಾಲು ಸಾಲು ಸಾಂಪ್ರದಾಯಿಕ ದಿನಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳವು (KMF) ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ. ತನ್ನ ‘ನಂದಿನಿ’ ಬ್ರ್ಯಾಂಡ್ನ ಪ್ರಮುಖ ಉತ್ಪನ್ನಗಳಾದ ತುಪ್ಪ ಮತ್ತು ಬೆಣ್ಣೆಯ ಲೀಟರ್ ಹಾಗೂ ಕೆಜಿ ದರವನ್ನು ಏಕಾಏಕಿ ಹೆಚ್ಚಳ ಮಾಡಿದ್ದು, ಪರಿಷ್ಕೃತ ದರಗಳು ಜುಲೈ 24 ರಿಂದಲೇ ರಾಜ್ಯಾದ್ಯಂತ ಜಾರಿಗೆ ಬರಲಿವೆ.
ಈ ನೂತನ ಬೆಲೆ ಪರಿಷ್ಕರಣೆಯ ಪ್ರಕಾರ ತುಪ್ಪದ ದರದಲ್ಲಿ ಪ್ರತಿ ಕೆಜಿಗೆ 15 ರೂಪಾಯಿ ಹಾಗೂ ಬೆಣ್ಣೆಯ ದರದಲ್ಲಿ ಪ್ರತಿ ಕೆಜಿಗೆ 22 ರೂಪಾಯಿ ಏರಿಕೆ ಮಾಡಲಾಗಿದೆ. ಈ ಸಡನ್ ಬೆಲೆ ಏರಿಕೆಯು ಕೇವಲ ಸಾಮಾನ್ಯ ಗೃಹಿಣಿಯರ ಮಾಸಿಕ ಖರ್ಚಿನ ಮೇಲಷ್ಟೇ ಅಲ್ಲದೆ, ಸಿಹಿ ತಿಂಡಿ ತಯಾರಕರು, ಬೇಕರಿಗಳು ಹಾಗೂ ಹೋಟೆಲ್ ಉದ್ಯಮದ ಬಜೆಟ್ ಮೇಲೆಯೂ ತೀವ್ರ ಪರಿಣಾಮ ಬೀರಲಿದೆ.
ಉತ್ಪಾದನಾ ವೆಚ್ಚ, ಕಚ್ಚಾ ಸಾಮಗ್ರಿಗಳ ಪ್ಯಾಕೇಜಿಂಗ್ ದರ ಹಾಗೂ ಇಂಧನ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ದರ ಏರಿಕೆ ಅನಿವಾರ್ಯವಾಗಿದೆ ಎಂದು ಕೆಎಂಎಫ್ ಸ್ಪಷ್ಟನೆ ನೀಡಿದೆ. ಅಲ್ಲದೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಖಾಸಗಿ ಬ್ರ್ಯಾಂಡ್ಗಳಿಗೆ ಹೋಲಿಸಿದರೆ ನಂದಿನಿ ಉತ್ಪನ್ನಗಳ ಬೆಲೆ ಇಂದಿಗೂ ಸಾರ್ವಜನಿಕರಿಗೆ ಕೈಗೆಟುಕುವಂತಿದೆ ಎಂದು ಸಂಸ್ಥೆ ಸಮರ್ಥಿಸಿಕೊಂಡಿದೆ.
ಆದಾಗ್ಯೂ, ಹಬ್ಬದ ಸಂಭ್ರಮದ ಹೊಸ್ತಿಲಲ್ಲೇ ಕೆಎಂಎಫ್ ಕೈಗೊಂಡಿರುವ ಈ ನಿರ್ಧಾರಕ್ಕೆ ರಾಜ್ಯದಾದ್ಯಂತ ಸಾರ್ವಜನಿಕರಿಂದ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ರಾಜ್ಯ ಸುದ್ದಿಗಳು, ಟಾಪ್ ಸುದ್ದಿ, ವ್ಯವಹಾರ, ಸುದ್ದಿಗಳು










