ಮಂಗಳೂರು : ಕಳೆದ ಮೂರು ದಶಕಗಳಿಂದ ಕ್ರೀಡಾ ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಅಪಾರ ಕೊಡುಗೆಯನ್ನು ಗುರುತಿಸಿ ಮಂಗಳೂರಿನ ಹಿರಿಯ ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್ಪೇಟೆ ಅವರಿಗೆ ಪ್ರತಿಷ್ಠಿತ ‘ಬಸವಶ್ರೀ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ಬನಶಂಕರಿಯ ಜೆ.ಎಸ್.ಎಸ್. ಪಬ್ಲಿಕ್ ಶಾಲೆಯಲ್ಲಿ ಶ್ರೀ ಜ್ಞಾನ ಮಂದಾರ ಎಜುಕೇಶನಲ್ ಮತ್ತು ಸಾಂಸ್ಕೃತಿಕ ಟ್ರಸ್ಟ್ನ ರಜತ ಮಹೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಆರ್.ಎನ್.ಎಸ್. ಕಾಲೇಜಿನ ಪ್ರಾಂಶುಪಾಲ ಪ್ರೊ. ರವಿಶಂಕರ್ ಬಿ.ವಿ. ಅವರು ಜಗದೀಶ್ಚಂದ್ರ ಅವರಿಗೆ ಚಿನ್ನ ಹಾಗೂ ಬೆಳ್ಳಿ ಪದಕದೊಂದಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕ್ರೀಡಾಪಟುಗಳ ಸಾಧನೆ ಹಾಗೂ ಕ್ರೀಡಾ ಕ್ಷೇತ್ರದ ವಿವಿಧ ಆಯಾಮಗಳನ್ನು ತಮ್ಮ ಅಂಕಣಗಳ ಮೂಲಕ ನಿರಂತರವಾಗಿ ಕಟ್ಟಿಡುತ್ತಿರುವ ಅಂಚನ್ ಅವರ ಬರಹಗಳನ್ನು ಸಮಾರಂಭದಲ್ಲಿ ಮುಕ್ತಕಂಠದಿಂದ ಶ್ಲಾಘಿಸಲಾಯಿತು. ಇದೇ ವೇಳೆ ಬೆಂಗಳೂರಿನ ಆರ್.ಎನ್.ಎಸ್. ಕಾಲೇಜು ಮತ್ತು ಮುಡಿಪುವಿನ ಜ್ಞಾನಶ್ರೀ ವಿದ್ಯಾಲಯದ ವತಿಯಿಂದಲೂ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು. ಬಸವ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಮುಖ ಉದ್ಯಮಿಗಳು, ನೃತ್ಯ ಕಲಾವಿದ ಹಾಗೂ ಚಲನಚಿತ್ರ ನಟಿ ಎಂ.ಎಸ್. ಆರತಿ ಸುರೇಶ್ ಸೇರಿದಂತೆ ಹಲವು ರಂಗಗಳ ಗಣ್ಯರು ಉಪಸ್ಥಿತರಿದ್ದರು.
ಕ್ರೀಡಾ ಬರಹಕ್ಕಾಗಿ 2013ರಲ್ಲಿ ‘ಮೀಡಿಯಾ ಅವಾರ್ಡ್’ ಪಡೆದಿದ್ದ ಜಗದೀಶ್ಚಂದ್ರ ಅಂಚನ್, ನಂತರದ ವರ್ಷಗಳಲ್ಲಿ ‘ಸಮಾಜ ರತ್ನ’ ಪ್ರಶಸ್ತಿ, 2016ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2018ರಲ್ಲಿ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ, 2019ರಲ್ಲಿ ಜಾನಪದ ಲೋಕ ಪ್ರಶಸ್ತಿ ಹಾಗೂ 2020ರಲ್ಲಿ ಕೆ.ಎ. ನೆಟ್ಟಕಲ್ಲಪ್ಪ ರಾಜ್ಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮುಂದುವರಿದು, 2021ರಲ್ಲಿ ಸಿದ್ಧಗಂಗಾಶ್ರೀ ಪ್ರಶಸ್ತಿ, 2024ರಲ್ಲಿ ಕರ್ನಾಟಕ ಕಲಾಶ್ರೀ ಮತ್ತು 2026ರಲ್ಲಿ ಜಾನಪದ ರತ್ನ ಹಾಗೂ ಕನ್ನಡ ಪಯಸ್ವಿನಿ ಪ್ರಶಸ್ತಿ ಸೇರಿದಂತೆ ಸಾಲು ಸಾಲು ರಾಜ್ಯ ಹಾಗೂ ಅಂತರ್ ರಾಜ್ಯ ಪುರಸ್ಕಾರಗಳನ್ನು ಪಡೆದು ಕ್ರೀಡಾ ರಂಗದಲ್ಲಿ ಮುಂಚೂಣಿಯಲ್ಲಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









