ಮಂಗಳೂರು : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಂಬರುವ ಕೃಷ್ಣ ಜನ್ಮಾಷ್ಟಮಿ ಮತ್ತು ಕ್ರೈಸ್ತ ಸಮುದಾಯದ ಮರಿಯ ಜಯಂತಿ (ತೆನೆ ಹಬ್ಬ) ಆಚರಣೆಗೆ ಅನುಕೂಲವಾಗುವಂತೆ ಸಾರ್ವತ್ರಿಕ ಸ್ಥಳೀಯ ರಜೆ ಘೋಷಿಸಬೇಕೆಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕರಾವಳಿ ಭಾಗದಲ್ಲಿ ಸೆಪ್ಟೆಂಬರ್ 4 ರಂದು ಅಸಂಖ್ಯಾತ ಭಕ್ತರು ಶ್ರದ್ಧಾ ಭಕ್ತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಿದ್ದಾರೆ. ಇದು ಕೇವಲ ಧಾರ್ಮಿಕ ಆಚರಣೆಯಾಗಿರದೆ, ನಮ್ಮ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಮುಖ ಹಬ್ಬವಾಗಿದೆ. ಅದೇ ರೀತಿ, ಸೆಪ್ಟೆಂಬರ್ 8 ರಂದು ಕ್ರೈಸ್ತ ಬಾಂಧವರು ಅತ್ಯಂತ ಶ್ರದ್ಧೆಯಿಂದ ಮರಿಯ ಜಯಂತಿ ಹಾಗೂ ತೆನೆ ಹಬ್ಬವನ್ನು ಆಚರಿಸಲಿದ್ದು, ಈ ಹಬ್ಬದ ಆಚರಣೆಗೆ ರಜೆ ನೀಡಬೇಕೆಂದು ಸಮುದಾಯದ ಮುಖಂಡರು ಹಾಗೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಮುಖರು ಕೋರಿಕೊಂಡಿದ್ದಾರೆ.
ಸಾರ್ವಜನಿಕರು ಹಾಗೂ ಭಕ್ತಾದಿಗಳು ಕುಟುಂಬ ಸಮೇತರಾಗಿ ಹಬ್ಬಗಳನ್ನು ಸಂಭ್ರಮಿಸಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿಗಳು ತಮ್ಮ ವಿಶೇಷ ಅಧಿಕಾರವನ್ನು ಬಳಸಿ ದಕ್ಷಿಣ ಕನ್ನಡ ಜಿಲ್ಲೆಗೆ ಸೆಪ್ಟೆಂಬರ್ 4 (ಕೃಷ್ಣ ಜನ್ಮಾಷ್ಟಮಿ) ಹಾಗೂ ಸೆಪ್ಟೆಂಬರ್ 8 (ಮರಿಯ ಜಯಂತಿ/ತೆನೆ ಹಬ್ಬ) ರಂದು ಸ್ಥಳೀಯ ರಜೆ ಘೋಷಿಸಬೇಕೆಂದು ಶಾಸಕರು ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









