ಬೆಂಗಳೂರು : ವಿಧಾನಸೌಧದ ಆವರಣದಲ್ಲಿ 80 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ “ಫ್ರೀಡಂ ಹಬ್ಬ” ದಲ್ಲಿ ಹೆಗಲ ಮೇಲೆ ತ್ರಿವರ್ಣ ಧ್ವಜ ಹೊತ್ತು ವಿಧಾನಸೌಧದ ಎದುರಿನ ರಸ್ತೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಉತ್ಸಾಹದಿಂದ ಹೆಜ್ಜೆ ಹಾಕಿದರು.
ವಿವಿಧೆಡೆಯಿಂದ ಶುಶ್ರೂಷಕಿಯರ ತಂಡ, ಸ್ರ್ತೀ ಜಾಗೃತಿ ಸಮಿತಿ, ತ್ಯಾಜ್ಯ ಶ್ರಮಿಕರ ಸಂಘದ ಮಹಿಳೆಯರು ಮುಖ್ಯಮಂತ್ರಿಯವರ ಜೊತೆ ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನೆರೆದಿದ್ದ ಯುವ ಸಮುದಾಯ, ಮಕ್ಕಳು, ಪೋಷಕರಿಗೆ ಕೈ ಬೀಸಿದರು.
ಕಹಳೆ ವಾದ್ಯದೊಂದಿಗೆ ಸಿಖ್ ಪೇಟಧಾರಿಯೊಬ್ಬರು ಮುಖ್ಯಮಂತ್ರಿಯವರನ್ನು ಬರ ಮಾಡಿಕೊಂಡರು. ಪಟ್ಕಾ ಸುತ್ತಿದ್ದ ಸಿಖ್ ಮಗುವಿಗೆ ಹಸ್ತಲಾಘವ ಮಾಡಿದರು.
ನಂತರ “ಫ್ರೀಡಂ ವಾಲ್” ಬಳಿ ತೆರಳಿ ಹಸ್ತಾಕ್ಷರ ಹಾಕಿದರು. ಬ್ಯಾರಿ ನೃತ್ಯ ಮಾಡುವ ಮಕ್ಕಳ ಬಳಿಯಿದ್ದ ಚರ್ಮವಾದ್ಯವನ್ನು “ಧಪ್” ಎಂದು ನುಡಿಸಿ ಸಂಭ್ರಮಿಸಿದರು.
ಕರ್ನಾಟಕದ ವಿವಿಧ ಜಿಲ್ಲೆಗಳ ಸಂಸ್ಕೃತಿ ಬಿಂಬಿಸುವ ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ‘ಸ್ವಾತಂತ್ರ್ಯ ಹೋರಾಟ’ಕ್ಕೆ ಜಿಲ್ಲೆಗಳ ಕೊಡುಗೆಗಳ ಬಗ್ಗೆ ಮಾಹಿತಿ ಪಡೆದರು.
ಬೆಂಗಳೂರಿನಲ್ಲಿರುವ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ವಸ್ತ್ರವಿನ್ಯಾಸ ಮಾಡಿಕೊಂಡಿದ್ದ ಮಹಿಳೆಯರು, ಯುವತಿಯರ ಕೈ ಕುಲುಕಿ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದರು.
ಸ್ಟಾಲ್ ಗಳಲ್ಲಿ ಮಕ್ಕಳ ಜೊತೆ ಮಕ್ಕಳಾಗಿ ಬೆರೆತ ಸಿಎಂ ಡಿ ಕೆ ಶಿವಕುಮಾರ್ ಅವರು, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಛದ್ಮ ವೇಷಧಾರಿಗಳ ಜೊತೆ ಫೋಟೊಗೆ ಪೋಜ್ ನೀಡುವ ಮೂಲಕ ಫ್ರೀಡಂ ಹಬ್ಬಕ್ಕೆ ಹೊಸ ರಂಗು ತುಂಬಿದರು.
ನಂತರ ವಿಧಾನಸೌಧದ ಆವರಣದಲ್ಲಿ ‘ಫೋಟೋ ಬೂತ್’ ಗೆ ತೆರಳಿ ಫೋಟೋಗೆ ಪೋಸ್ ನೀಡಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ರಾಜ್ಯ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









