ಪುತ್ತೂರು : ಪಡ್ನೂರು ಗ್ರಾಮದ ಅಜೇಯನಗರದ ‘ಕಲಾತ್ಮಿಕ’ ನಿವಾಸಿ, ರಾಮ ಭಟ್ ಅವರ ಪತ್ನಿ ವಿಜಯಾ ಟಿ. (60) ಅವರ ಮೃತದೇಹ ಶನಿವಾರ ಬಂಟ್ವಾಳ ತಾಲೂಕಿನ ಶಂಭೂರು ಸಮೀಪದ ನೇತ್ರಾವತಿ ನದಿ ಅಣೆಕಟ್ಟಿನಲ್ಲಿ ಪತ್ತೆಯಾಗಿದೆ. ಇವರು ಪುತ್ತೂರಿನ ಪ್ರಸಿದ್ಧ ವಿವೇಕಾನಂದ ಪದವಿ ಕಾಲೇಜಿನಲ್ಲಿ ಸುದೀರ್ಘ ಕಾಲ ಗ್ರಂಥಪಾಲಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಗುರುವಾರ ಬೆಳಿಗ್ಗೆ ಪುತ್ತೂರು ನಗರಕ್ಕೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ವಿಜಯಾ ಅವರು ಸಂಜೆಯಾದರೂ ವಾಪಸ್ ಬಂದಿರಲಿಲ್ಲ. ಆತಂಕಗೊಂಡ ಕುಟುಂಬಸ್ಥರು ಸಂಬಂಧಿಕರ ಹಾಗೂ ಪರಿಚಿತರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದರು.
ದೂರು ದಾಖಲಾಗಿ ತನಿಖೆ ನಡೆಯುತ್ತಿದ್ದಂತೆಯೇ, ಶನಿವಾರ ಶಂಭೂರು ಅಣೆಕಟ್ಟಿನ ನೀರು ಸಂಗ್ರಹ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ದಡಕ್ಕೆ ತಂದು ಪರಿಶೀಲಿಸಿದಾಗ ಅದು ನಾಪತ್ತೆಯಾಗಿದ್ದ ವಿಜಯಾ ಅವರದ್ದೇ ಎಂದು ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ವಿಜಯಾ ಅವರು ನೇತ್ರಾವತಿ ನದಿಗೆ ಹಾರಿ ಜೀವ ಕಳೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಈ ಸಾವಿಗೆ ನಿಖರವಾದ ಕಾರಣವೇನೆಂಬುದು ಇನ್ನು ತಿಳಿದುಬಂದಿಲ್ಲವಾಗಿದ್ದು, ಪುತ್ತೂರು ಮತ್ತು ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ಕೈಗೊಂಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










