ನರಿಂಗಾನ : ತುಳುನಾಡಿನ ಜನಪದ ಕ್ರೀಡೆಯಾದ ಕಂಬಳ ರಂಗಕ್ಕೆ ತಮ್ಮದೇ ಆದ ಶ್ರೇಷ್ಠ ಕೊಡುಗೆ ನೀಡಿ, ಹಲವು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದ ನರಿಂಗಾನ ಗ್ರಾಮದ ಕಂಬಳ ಕೋಣಗಳ ಯಜಮಾನ ಮೀನಂಕೋಡಿ ಶೇಖರ್ ಶೆಟ್ಟಿ ಅವರು ಗುರುವಾರ ಮುಂಜಾನೆ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಂಬಳ ಕ್ರೀಡೆಯ ಬಗ್ಗೆ ಅಪಾರ ಪ್ರೀತಿ ಮತ್ತು ನಿಷ್ಠೆ ಹೊಂದಿದ್ದ ಶೆಟ್ಟರು, ದಶಕಗಳ ಹಿಂದೆಯೇ ಕಂಬಳ ಕೂಟಗಳಲ್ಲಿ ಸಾಲು ಸಾಲು ಮೆಡಲ್ ಗೆದ್ದು ಕೀರ್ತಿಭಾಜನರಾಗಿದ್ದರು. ನರಿಂಗಾನ ಕಂಬಳದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಅವರು, ಪ್ರತಿವರ್ಷ ಜುಲೈ ತಿಂಗಳಲ್ಲಿ ನೆರವೇರುವ ‘ಕಂಬಳ ಕುದಿ’ ಮುಹೂರ್ತದಿಂದ ಹಿಡಿದು ಪ್ರತಿಯೊಂದು ಪ್ರಮುಖ ಆಚರಣೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಕಂಬಳ ಕರೆಗೆ ಬೆಂಬಲವಾಗಿ ನಿಲ್ಲುತ್ತಿದ್ದರು.
ಅಗಲಿದ ಹಿರಿಯ ಚೇತನದ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಮಧ್ಯಾಹ್ನ 3.00 ಗಂಟೆಗೆ ಅವರ ಸ್ವಗೃಹವಾದ ಮೀನಂಕೋಡಿ ಮನೆಯಲ್ಲಿ ಜರುಗಲಿವೆ ಎಂದು ಅವರ ಪುತ್ರ ಹಾಗೂ ನರಿಂಗಾನ ಕಂಬಳ ಸಮಿತಿಯ ಸದಸ್ಯರಾದ ಚೇತನ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಕಂಬಳ ಕ್ಷೇತ್ರದ ಹಿರಿಯ ಸಾಧಕರ ಅಗಲಿಕೆಗೆ ನರಿಂಗಾನ ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ಅರೋಗ್ಯ ಸಚಿವರಾದ ಯು.ಟಿ. ಖಾದರ್, ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ ಸೇರಿದಂತೆ ಕಂಬಳ ಸಮಿತಿಯ ಸಮಸ್ತ ಪದಾಧಿಕಾರಿಗಳು ಹಾಗೂ ಕಂಬಳಾಭಿಮಾನಿಗಳು ತೀವ್ರ ಶೋಕ ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










