ಮಂಗಳೂರು : ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಪ್ರಮುಖ ಅಗತ್ಯಗಳಾದ ರಸ್ತೆ, ಮೀನುಗಾರಿಕೆ, ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಸಂಪುಟ ಸಭೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಕೈಗಾರಿಕಾ ಸಂಘಟನೆಗಳು, ಮೀನುಗಾರಿಕಾ ಮುಖಂಡರು, ಪ್ರವಾಸೋದ್ಯಮಿಗಳು ಮತ್ತು ಅಧಿಕಾರಿಗಳೊಂದಿಗೆ ಅವರು ಪೂರ್ವಭಾವಿ ಪರಿಶೀಲನಾ ಸಭೆ ನಡೆಸಿದರು.
ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ತರಬೇತಿ ಪಡೆಯುವ ಅಪ್ರೆಂಟಿಸ್ಗಳಿಗೆ ವಸತಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಕುರಿತು ಕೆನರಾ ಸಣ್ಣ ಕೈಗಾರಿಕಾ ಸಂಘದ ಮನವಿಯನ್ನು ಪರಿಗಣಿಸಿದ ಅವರು, ಬೈಕಂಪಾಡಿ ರಸ್ತೆ ಅಭಿವೃದ್ಧಿಗೆ ಈಗಾಗಲೇ 28 ಕೋಟಿ ರೂ. ವೆಚ್ಚದ ಯೋಜನೆ ಸಲ್ಲಿಕೆಯಾಗಿದ್ದು, ಹೊಸ ಕೈಗಾರಿಕಾ ಪ್ರದೇಶಗಳ ನಿರ್ಮಾಣಕ್ಕೆ ಜಮೀನು ಕೊರತೆ ನಿವಾರಿಸಲು ಸರ್ಕಾರ ಗಮನಹರಿಸಲಿದೆ ಎಂದರು.
ಮಂಗಳೂರಿನ ಹಳೆ ಬಂದರು ಧಕ್ಕೆಯಲ್ಲಿ ದೋಣಿಗಳಿಗೆ ಜಾಗದ ಅಭಾವ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಕಸಬಾ ಬೆಂಗ್ರೆ, ಹೊಸಬೆಟ್ಟು, ತಣ್ಣೀರುಬಾವಿ ಹಾಗೂ ಕೋಟೆಪುರಗಳಲ್ಲಿ ಹೊಸ ಮೀನುಗಾರಿಕಾ ಜೆಟ್ಟಿಗಳನ್ನು ನಿರ್ಮಿಸಬೇಕು ಎಂದು ಮೀನುಗಾರಿಕಾ ಮುಖಂಡರು ಒತ್ತಾಯಿಸಿದರು. ಇದರೊಂದಿಗೆ ನದಿಯಲ್ಲಿ ತುರ್ತಾಗಿ ಹೂಳೆತ್ತುವ (ಡ್ರೆಜ್ಜಿಂಗ್) ಕಾಮಗಾರಿ ಕೈಗೆತ್ತಿಕೊಳ್ಳುವಂತೆಯೂ ಅವರು ಸಚಿವರಲ್ಲಿ ವಿನಂತಿಸಿಕೊಂಡರು.
ನವ ಮಂಗಳೂರು ಬಂದರು ಪ್ರಾಧಿಕಾರದ (NMPA) ವ್ಯಾಪ್ತಿಯ 150 ಎಕರೆ ಪ್ರದೇಶವನ್ನು ಪ್ರವಾಸೋದ್ಯಮ ಸೌಕರ್ಯಕ್ಕಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ವಿವರಣೆ ನೀಡಿದರು. ಜೊತೆಗೆ, ಹಳೆ ಜಿಲ್ಲಾಧಿಕಾರಿ ಕಚೇರಿ ನವೀಕರಣ, ಆನೆ ಶಿಬಿರ ಸ್ಥಾಪನೆ, ಸಿ.ಆರ್.ಝೆಡ್ ನಿಯಮ ಸಡಿಲಿಕೆ ಮತ್ತು ಕರಾವಳಿ ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿದೆ ಎಂದು ತಿಳಿಸಿದರು.
ಶೈಕ್ಷಣಿಕ, ವೈದ್ಯಕೀಯ, ಧಾರ್ಮಿಕ ಹಾಗೂ ಐಟಿ ಕ್ಷೇತ್ರಗಳನ್ನು ಸಂಪರ್ಕಿಸುವ ತೊಕ್ಕೊಟ್ಟು-ಮುಡಿಪು-ಮೆಲ್ಕಾರ್ ರಸ್ತೆಯನ್ನು ಪ್ರಮುಖ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಿ, ಬೆಂಗಳೂರು ಮತ್ತು ಕೇರಳ ಹೆದ್ದಾರಿಗಳಿಗೆ ಸುಲಭ ಸಂಪರ್ಕ ಕಲ್ಪಿಸಲು ವಿಸ್ತೃತ ಪ್ರಸ್ತಾವನೆ ಸಿದ್ಧಪಡಿಸುವಂತೆ ಸಚಿವರು ಸೂಚಿಸಿದರು. ಈ ಪರಿಶೀಲನಾ ಸಭೆಯಲ್ಲಿ ಮೂಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಜಿ.ಪಂ. ಸಿಇಒ ನರ್ವಾಡೆ ವಿನಾಯಕ ಕಾರ್ಬಾರಿ, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಎಸ್ಪಿ ಡಾ. ಅರುಣ್ ಕೆ. ಹಾಗೂ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









