ಉಡುಪಿ : ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣವೊಂದರ ಜಾಮೀನು ಪ್ರಕ್ರಿಯೆಗೆ ಸಂಬಂಧಿಸಿದಂತೆ ನಕಲಿ ಆಧಾರ್ ಕಾರ್ಡ್ ಹಾಜರುಪಡಿಸಿದ ಗಂಭೀರ ಆರೋಪದಡಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳ ಮೂಲದ ಉಮ್ಮರ್ ಫಾರೂಕ್ (32) ಹಾಗೂ ಮಂಗಳೂರಿನ ನಿಶಾಂತ್ ಕುಮಾರ್ (24) ಎಂದು ಗುರುತಿಸಲಾಗಿದೆ.
ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದ ನೋಮಾನ್ ಎಂಬಾತನಿಗೆ ಜಾಮೀನು ನೀಡುವ ಸಂದರ್ಭದಲ್ಲಿ, ಆರೋಪಿಗಳು ಕೆಟಿ ಮೊಹಮ್ಮದ್ ಎಂಬವರ ಹೆಸರು ಮತ್ತು ವಿಳಾಸವನ್ನು ನಕಲಿಯಾಗಿ ಬಳಸಿ, ಪ್ರಶಾಂತ್ ಎಂಬವರ ಆಧಾರ್ ಕಾರ್ಡ್ ಮಾಹಿತಿ ತಿದ್ದಿ ವಂಚನೆ ಎಸಗಿದ್ದರು. ತನ್ನ ಸ್ವಂತ ಲಾಭಕ್ಕಾಗಿ ಮತ್ತೊಬ್ಬ ವ್ಯಕ್ತಿಯಂತೆ ನಟಿಸಿ ನಕಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ಕುರಿತು ತೀವ್ರ ತನಿಖೆ ನಡೆಸಿದ ಉಡುಪಿ ನಗರ ಠಾಣೆ ಪೊಲೀಸರು, ಆರೋಪಿಗಳಾದ ಉಮ್ಮರ್ ಫಾರೂಕ್ ಮತ್ತು ನಿಶಾಂತ್ ಕುಮಾರ್ ನನ್ನು ವಶಕ್ಕೆ ಪಡೆದು ನ್ಯಾಯಾಂಗದ ಮುಂದೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯವು ಬಂಧಿತ ಇಬ್ಬರೂ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









