ಉಡುಪಿ : ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಡೇವಿಡ್ ಡಿ’ಸೋಜಾ ಅವರನ್ನು ಆಗಸ್ಟ್ 7ರಂದು ಪಿಲಾರಿನಲ್ಲಿ ವಾಹನವೇರುತ್ತಿದ್ದ ವೇಳೆ ಹತ್ತಿರದಿಂದ ಗುಂಡಿಕ್ಕಿ ಭೀಕರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೃತ್ತಿಪರ ಅಂತರರಾಜ್ಯ ಸುಫಾರಿ ಶೂಟರ್ಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 8ರಂದು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಪಿಸ್ತೂಲ್ನಿಂದ ಮೂರು ಸುತ್ತು ಗುಂಡು ಹಾರಿಸಿ ಈ ಕೃತ್ಯ ಎಸಗಲಾಗಿದೆ ಎಂದರು. ಘಟನೆ ನಡೆದ ತಕ್ಷಣ ಕಾಪು ಸಿಐ ಹಾಗೂ ಎಸ್ಐ ನೇತೃತ್ವದಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಲಾಗಿದ್ದು, ಪಶ್ಚಿಮ ವಲಯ ಐಜಿ ಅಮಿತ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಚುರುಕು ಮುಟ್ಟಿಸಿದ್ದರು. ಪ್ರತ್ಯಕ್ಷದರ್ಶಿ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿತ್ತು.
ಕೊಲೆಯ ಬಳಿಕ ಆರೋಪಿಗಳು ಶಿರಸಿ, ಕುಮಟಾ, ಮಂಗಳೂರು ಅಥವಾ ಬೈಂದೂರು ಮಾರ್ಗವಾಗಿ ಪರಾರಿಯಾಗಬಹುದು ಎಂಬ ಸುಳಿವು ಸಿಗುತ್ತಿದ್ದಂತೆ ಜಿಲ್ಲೆಯಾದ್ಯಂತ ತೀವ್ರ ತಪಾಸಣೆ ಕೈಗೊಂಡು ಉತ್ತರ ಕನ್ನಡ ಹಾಗೂ ರೈಲು ನಿಲ್ದಾಣಗಳಲ್ಲಿ ಚೆಕ್ಪೋಸ್ಟ್ ನಿರ್ಮಿಸಲಾಯಿತು. ಬೈಂದೂರು ಬಳಿ ತಪಾಸಣೆ ನಡೆಸುತ್ತಿದ್ದಾಗ ಬಸ್ ನಿರ್ವಾಹಕರೊಬ್ಬರು ನೀಡಿದ ಮಾಹಿತಿಯಂತೆ ಕಾರ್ಯಾಚರಣೆ ತೀವ್ರಗೊಳಿಸಿ, ಸ್ಥಳದಲ್ಲಿದ್ದ ಉತ್ತರಾಖಂಡ ಮೂಲದ ಪ್ರಮುಖ ಆರೋಪಿ ರಾಜುನನ್ನು ಪಿಸ್ತೂಲ್ ಸಹಿತ ಬಂಧಿಸಲಾಯಿತು. ಈ ಬಂಧನದ ವೇಳೆ ಪಿಎಸ್ಐ ತೇಜಸ್ವಿ ಗಾಯಗೊಂಡಿದ್ದರು. ಬಳಿಕ ಭಟ್ಕಳ ಮತ್ತು ಕುಮಟಾಗಳಲ್ಲಿ ಇತರ ಇಬ್ಬರು ಆರೋಪಿಗಳಾದ ಅಜಯ್ ರಸ್ತೋಗಿ ಅಲಿಯಾಸ್ ಅನ್ಮೋಲ್ (23) ಹಾಗೂ ಬಿಹಾರದ ಜಿಯಾಹುಲ್ ವಜೂಲ್ ಶೇಖ್ ಅಲಿಯಾಸ್ ದೀಪಕ್ (38) ನನ್ನು ಸೆರೆಹಿಡಿಯಲಾಯಿತು. ಬಂಧಿತ ರಾಜು ವಿರುದ್ಧ 5 ರಾಜ್ಯಗಳಲ್ಲಿ 26, ಅಜಯ್ ವಿರುದ್ಧ 8 ಹಾಗೂ ಜಿಯಾಹುಲ್ ವಿರುದ್ಧ 12 ಕ್ರಿಮಿನಲ್ ಪ್ರಕರಣಗಳಿವೆ.
ಡೇವಿಡ್ ಡಿ’ಸೋಜಾ ಅವರೊಂದಿಗೆ ಹಣಕಾಸಿನ ವೈಷಮ್ಯ ಹೊಂದಿದ್ದ ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬ ಕೊಲೆಗೆ ಸುಫಾರಿ ನೀಡಿದ್ದು, ಈ ವಿವಾದದ ಮೊತ್ತ ಸುಮಾರು ₹2–3 ಕೋಟಿ ರೂಪಾಯಿ ಎಂದು ಶಂಕಿಸಲಾಗಿದೆ. ಕೊಲೆಗೆ ಬಳಸಲಾದ ಕೃತ್ಯದ ಬೈಕ್ ಅನ್ನು ಯೆರ್ಮಾಲ್ನಲ್ಲಿ ವಶಪಡಿಸಿಕೊಳ್ಳಲಾಗಿದ್ದು, ಅದಕ್ಕೆ ಶಾಲಾ ಬಸ್ನ ನಕಲಿ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು. ಆರೋಪಿಗಳು ತಲಾ 2–3 ಫೋನ್, ಹಲವು ಸಿಮ್ ಹಾಗೂ ನಕಲಿ ಗುರುತುಗಳನ್ನು ಬಳಸುತ್ತಿದ್ದರು. ಒಂದು ವಾರದ ಮುಂಚೆಯೇ ಪ್ರದೇಶಕ್ಕೆ ಬಂದಿದ್ದ ಇವರಿಗೆ ಸ್ಥಳೀಯವಾಗಿ ನೆರವು ನೀಡಿದವರ ಬಗ್ಗೆಯೂ ತನಿಖೆ ಮುಂದುವರಿದಿದ್ದು, ಪೊಲೀಸ್ ತಂಡವೊಂದು ಉತ್ತರ ಭಾರತಕ್ಕೆ ತೆರಳಿದೆ. ಯುಪಿಸಿಎಲ್ ಗುತ್ತಿಗೆ ಕೆಲಸಕ್ಕೆ ಸಂಬಂಧಿಸಿದ ವ್ಯಕ್ತಿಯ ಭಾಗವಹಿಸುವಿಕೆ ಹಾಗೂ ರಾಜು ಖಾತೆಗೆ ವರ್ಗಾವಣೆಯಾದ ₹2 ಲಕ್ಷದ ಬಗ್ಗೆಯೂ 500ಕ್ಕೂ ಹೆಚ್ಚು ಸಿಬ್ಬಂದಿಗಳನ್ನೊಳಗೊಂಡ ಪೊಲೀಸ್ ಪಡೆ ಸಮಗ್ರ ತನಿಖೆ ನಡೆಸುತ್ತಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









