ಉಡುಪಿ : ಮುದರಂಗಡಿ ಪೇಟೆಯ ಸೈಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್ನಲ್ಲಿರುವ ಪ್ರಿನ್ಸ್ ಎಂಟರ್ಪ್ರೈಸಸ್ ಕಚೇರಿಯ ಮಾಲೀಕ, 55 ವರ್ಷದ ಉದ್ಯಮಿ ಡೇವಿಡ್ ಡಿಸೋಜಾ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಸ್ಟ್ 12ರ ಬುಧವಾರದಂದು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತರಾದವರನ್ನು ಎರ್ಮಾಳು ತೆಂಕ ಪ್ರದೇಶದ ನಿವಾಸಿಗಳಾದ ಚಿರಾಗ್ ಪೂಜಾರಿ (26) ಹಾಗೂ ಮೊಹಮ್ಮದ್ ಇರ್ಫಾನ್ (42) ಎಂದು ಗುರುತಿಸಲಾಗಿದೆ.
ಆಗಸ್ಟ್ 7ರಂದು ಮುದರಂಗಡಿಯಲ್ಲಿ ಮೋಟಾರ್ ಸೈಕಲ್ನಲ್ಲಿ ಬಂದಿದ್ದ ದುಷ್ಕರ್ಮಿಗಳ ಪೈಕಿ ಹಿಂಬದಿ ಸವಾರ ಉದ್ಯಮಿ ಡೇವಿಡ್ ಅವರಿಗೆ ಪಿಸ್ತೂಲ್ನಿಂದ ತಲೆಗೆ ಗುಂಡು ಹಾರಿಸಿ ಹತ್ಯೆಗೈದಿದ್ದನು. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆ ಚುರುಕುಗೊಂಡಿತ್ತು.
ಈ ಕೃತ್ಯಕ್ಕೆ ನೇರವಾಗಿ ಸಂಬಂಧಿಸಿದಂತೆ ಈಗಾಗಲೇ ಉತ್ತರ ಪ್ರದೇಶದ ರಾಜು (42), ಉತ್ತರಾಖಂಡದ ಅಜಯ್ ರಸ್ತೋಗಿ ಅಲಿಯಾಸ್ ಅನ್ನೋಲ್ (23) ಮತ್ತು ಬಿಹಾರದ ಜಿಯಾಹುಲ್ ವಜೂಲ್ ಶೇಖ್ ಅಲಿಯಾಸ್ ದೀಪಕ್ (38) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಪ್ರಕರಣದ ಸುದೀರ್ಘ ತನಿಖೆ ಮುಂದುವರಿದಾಗ, ಹಂತಕರಿಗೆ ಹಣಕಾಸಿನ ನೆರವು ನೀಡಿ ಕೃತ್ಯಕ್ಕೆ ಸಹಕರಿಸಿದ್ದ ಚಿರಾಗ್ ಮತ್ತು ಇರ್ಫಾನ್ ಪಾತ್ರ ಬಯಲಿಗೆ ಬಂದಿದೆ.
ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕೊಲೆ ಪ್ರಕರಣದ ಹಿಂದಿರುವ ಸಂಪೂರ್ಣ ಜಾಲವನ್ನು ಭೇದಿಸಲು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









