ಉಡುಪಿ : ಮುದರಂಗಡಿಯಲ್ಲಿ ಇತ್ತೀಚೆಗೆ ನಡೆದ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣವು ಕರಾವಳಿ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಇದರ ಬೆನ್ನಲ್ಲೇ ಮುಂಬೈ ಅಂಡರ್ವರ್ಲ್ಡ್ ನಂಟು ಮತ್ತೆ ಮುನ್ನೆಲೆಗೆ ಬಂದಿದೆ. ಕೊಲೆಗೆ ಸಂಬಂಧಿಸಿದಂತೆ ಸರಣಿ ಬಂಧನಗಳು ನಡೆಯುತ್ತಿರುವಂತೆಯೇ, ಛೋಟಾ ರಾಜನ್ನ ನಿಕಟವರ್ತಿಯಾಗಿದ್ದ ಕುಖ್ಯಾತ ಗ್ಯಾಂಗ್ಸ್ಟರ್ ಹೇಮಂತ್ ಪೂಜಾರಿ (HP) ಹೆಸರು ತನಿಖೆಯಲ್ಲಿ ಕೇಳಿಬರುತ್ತಿದೆ.
ತನಿಖೆಯ ವೇಳೆ ಕೃತ್ಯಕ್ಕೆ ಅಗತ್ಯವಿದ್ದ ಹಣಕಾಸಿನ ನೆರವನ್ನು ಹೇಮಂತ್ ಪೂಜಾರಿಯ ಸಹೋದರ ಕಿಶೋರ್ ಪೂಜಾರಿ ಒದಗಿಸಿದ್ದಾನೆ ಎಂಬ ಗಂಭೀರ ಆರೋಪ ವ್ಯಕ್ತವಾಗಿದೆ. ಪಡುಬಿದ್ರಿಯ ಯುಪಿಸಿಎಲ್ ಸಂಸ್ಥೆಯಲ್ಲಿ ಗುತ್ತಿಗೆ ಪಡೆಯಲು ಕಿಶೋರ್ ಯತ್ನಿಸಿದ್ದು, ಆ ಅವಕಾಶ ಮೃತ ಡೇವಿಡ್ ಡಿಸೋಜಾ ಪಾಲಾಗಿದ್ದೇ ಈ ಹತ್ಯೆಗೆ ಮೂಲ ಕಾರಣ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೇಮಂತ್ ಪೂಜಾರಿಯದ್ದು ಎನ್ನಲಾದ ಹಲವು ಬೆದರಿಕೆ ಆಡಿಯೋ ಕ್ಲಿಪ್ಗಳು ಲಭ್ಯವಾಗಿದ್ದು, ಪೊಲೀಸರು ಅವುಗಳ ಸತ್ಯಾಸತ್ಯತೆಯನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ.
ಉಡುಪಿ ಎಸ್ಪಿ ಹರಿರಾಮ್ ಶಂಕರ್ ನೀಡಿರುವ ಮಾಹಿತಿಯಂತೆ, ಯುಪಿಸಿಎಲ್ ಅಧಿಕಾರಿಗಳು ಹಾಗೂ ಡೇವಿಡ್ ಅವರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತಾನೇ ಹೇಮಂತ್ ಪೂಜಾರಿ ಎಂದು ಪರಿಚಯಿಸಿಕೊಂಡು ಗುತ್ತಿಗೆಯನ್ನು ಕಿಶೋರ್ಗೆ ನೀಡುವಂತೆ ಬೆದರಿಕೆ ಹಾಕಿದ್ದ. ಇದಲ್ಲದೆ, ಪ್ರಕರಣದ ಆರೋಪಿಗಳಾದ ಚಿರಾಗ್ ಪೂಜಾರಿ, ಸದಾನಂದ ದೇವಾಡಿಗ, ಶೂಟರ್ಗಳಾದ ರಾಜು, ಅನ್ಮೋಲ್ ರಸ್ತೋಗಿ ಹಾಗೂ ಜಿಯಾವುಲ್ ಶೇಖ್ ಜೊತೆ ಸಂಪರ್ಕದಲ್ಲಿದ್ದು ಕಾರ್ಯಾಚರಣೆಯ ಸಮನ್ವಯ ನಡೆಸಿದ್ದ ಎಂದು ತಿಳಿದುಬಂದಿದೆ.
ಮುಂಬೈನಲ್ಲಿ ಹೋಟೆಲ್ ಮಾಲೀಕರ ಹತ್ಯೆ ಹಾಗೂ ಹಫ್ತಾ ವಸೂಲಿಯಲ್ಲಿ ಸಕ್ರಿಯನಾಗಿದ್ದ ಹೇಮಂತ್ ಪೂಜಾರಿ 2011ರ ಬೇಕರಿ ಮಾಲೀಕ ಅಂಗಾರ ಪೂಜಾರಿ ಕೊಲೆ ಬಳಿಕ ನಾಪತ್ತೆಯಾಗಿದ್ದ. 2013ರಲ್ಲಿ ಆತ ವಿದೇಶದಲ್ಲಿ ಮೃತಪಟ್ಟಿದ್ದಾನೆ ಎಂಬ ವದಂತಿಗಳಿದ್ದವು. ಆದರೆ 11 ವರ್ಷಗಳ ಸುದೀರ್ಘ ಮೌನದ ಬಳಿಕ ಮುದರಂಗಡಿ ಕೊಲೆ ಪ್ರಕರಣದಲ್ಲಿ ‘ಹೆಚ್ಪಿ’ ಹೆಸರು ಮತ್ತೆ ಕೇಳಿಬಂದಿರುವುದು ಕರಾವಳಿ ಮತ್ತು ಮುಂಬೈನ ಉದ್ಯಮಿಗಳಲ್ಲಿ ತೀವ್ರ ಆತಂಕವನ್ನುಂಟುಮಾಡಿದ್ದು, ಮುಂಬೈ ಪೊಲೀಸರು ಸಹ ಪ್ರತ್ಯೇಕ ತನಿಖೆಗೆ ಮುಂದಾಗಿದ್ದಾರೆ.
ಆರಂಭದಲ್ಲಿ ಘಾಟ್ಕೋಪರ್ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ ಹೇಮಂತ್ ಪೂಜಾರಿ, ಬಳಿಕ ಛೋಟಾ ರಾಜನ್ ಗ್ಯಾಂಗ್ ಸೇರಿ ಪ್ರಮುಖ ಶೂಟರ್ ಆಗಿ ಬೆಳೆದಿದ್ದ. 2002ರ ವೇಳೆಗೆ ರಾಜನ್ ಗ್ಯಾಂಗ್ನಿಂದ ಹೊರಬಂದು ಸ್ವಂತ ಗ್ಯಾಂಗ್ ಕಟ್ಟಿಕೊಂಡಿದ್ದ ಆತನ ಧ್ವನಿ ಆಡಿಯೋದಲ್ಲಿರುವುದು ದೃಢಪಟ್ಟರೆ, ಕರಾವಳಿಯ ಕೊಲೆ ಪ್ರಕರಣಕ್ಕೆ ಮುಂಬೈ ಅಂಡರ್ವರ್ಲ್ಡ್ ಜೊತೆಗಿರುವ ಕರಾಳ ಸಂಬಂಧ ಅಧಿಕೃತವಾಗಿ ಸಾಬೀತಾಗಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









