ಮಂಗಳೂರು : ದೇಶದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭಗಳಲ್ಲಿ ಅತ್ಯಂತ ಸಂಭ್ರಮದಿಂದ ಹಾರಿಸಲ್ಪಡುವ ರಾಷ್ಟ್ರಧ್ವಜಗಳಿಗೆ ನಂತರದ ದಿನಗಳಲ್ಲಿ ಆಗುವ ಅವಮಾನವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿ ತೀವ್ರ ಕಳಕಳಿ ವ್ಯಕ್ತಪಡಿಸಿದೆ. ರಸ್ತೆಗಳು, ಚರಂಡಿಗಳು ಹಾಗೂ ಕಸದ ತೊಟ್ಟಿಗಳಲ್ಲಿ ಹರಿದು ಬಿದ್ದಿರುವ ಪ್ಲಾಸ್ಟಿಕ್ ಹಾಗೂ ಕಾಗದದ ಧ್ವಜಗಳು ಜನರ ಕಾಲ್ಕೆಳಗೆ ತುಳಿಯಲ್ಪಡುವುದು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ದೇಶಭಕ್ತರಿಗೆ ಎಸಗುವ ಘೋರ ಅಪಚಾರವಾಗಿದೆ. ಇದರ ಜೊತೆಗೆ ತ್ರಿವರ್ಣ ಮಾಸ್ಕ್ ಬಳಸುವುದು ಮತ್ತು ಮಾರಾಟ ಮಾಡುವುದು ‘ರಾಷ್ಟ್ರದ ಗೌರವದ ಅಪಮಾನ ನಿವಾರಣೆ ಅಧಿನಿಯಮ 1971’ ಹಾಗೂ ಧ್ವಜ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಕಾನೂನಿನ ಪ್ರಕಾರ ಅಪರಾಧವಾಗಿದೆ.
ಈ ಅಪಮಾನಗಳನ್ನು ತಡೆಯುವ ಸಲುವಾಗಿ ಸಮಿತಿಯು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಸ್ಕರಿಸಿದ್ದ ಮುಂಬೈ ಉಚ್ಚ ನ್ಯಾಯಾಲಯವು ಪ್ಲಾಸ್ಟಿಕ್ ಧ್ವಜಗಳನ್ನು ನಿಷೇಧಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದರನ್ವಯ ಕೇಂದ್ರ ಹಾಗೂ ರಾಜ್ಯ ಗೃಹ ಮತ್ತು ಶಿಕ್ಷಣ ಇಲಾಖೆಗಳು ಸುತ್ತೋಲೆಗಳನ್ನು ಹೊರಡಿಸಿದ್ದು, ‘ಲಾಂಛನಗಳು ಮತ್ತು ಹೆಸರುಗಳ (ಅನುಚಿತ ಬಳಕೆ ತಡೆ) ಕಾಯಿದೆ 1950’ ಹಾಗೂ ಇತರ ನಿಯಮಗಳಡಿ ಪ್ಲಾಸ್ಟಿಕ್ ಧ್ವಜ ಉತ್ಪಾದನೆ ಮತ್ತು ಮಾರಾಟ ಸಂಪೂರ್ಣ ಕಾನೂನುಬಾಹಿರವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಕಳೆದ 16 ವರ್ಷಗಳಿಂದ ‘ರಾಷ್ಟ್ರಧ್ವಜವನ್ನು ಗೌರವಿಸಿ!’ ಎಂಬ ಬೃಹತ್ ಜಾಗೃತಿ ಅಭಿಯಾನವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.
ರಾಷ್ಟ್ರಧ್ವಜದ ಪಾವಿತ್ರ್ಯತೆಯನ್ನು ಕಾಯುವ ಉದ್ದೇಶದಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸಮಿತಿ ವತಿಯಿಂದ ಪ್ರತ್ಯೇಕ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಹೈಕೋರ್ಟ್ ನಿರ್ದೇಶನದಂತೆ ಜಿಲ್ಲೆಯಲ್ಲಿ ‘ರಾಷ್ಟ್ರ ಧ್ವಜ ಗೌರವ ಕೃತಿ ಸಮಿತಿ’ ರಚಿಸಿ, ನಿಷೇಧಿತ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವವರ ಮೇಲೆ ತಕ್ಷಣದ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್ ಅವರಿಗೆ ಕೋರಲಾಗಿದೆ. ಹಾಗೆಯೇ, ಪೊಲೀಸ್ ಇಲಾಖೆಯು ಧ್ವಜ ಸಂಹಿತೆ ಉಲ್ಲಂಘಿಸುವ ಅಂಗಡಿಕಾರರು ಹಾಗೂ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಿನಂತಿಸಲಾಗಿದೆ.
ಮತ್ತೊಂದೆಡೆ, ಕೆನರಾ ಹೈಸ್ಕೂಲ್, ಕಾಸರಗೋಡಿನ ಬಿ.ಎಂ. ಹಿರಿಯ ಪ್ರಾಥಮಿಕ ಶಾಲೆ, ತೊಕ್ಕೊಟ್ಟಿನ ಶ್ರೀ ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆ, ಮಾಡೂರು ಸರ್ಕಾರಿ ಶಾಲೆ, ಪೆರ್ಲಡ್ಕದ ಶ್ರೀ ವಿವೇಕಾನಂದ ಸ್ಕೂಲ್, ಕುಳಾಯಿಯ ಅಂಕುರ್ ಪ್ರೌಢಶಾಲೆ ಹಾಗೂ ಮಂಗಳೂರಿನ ಶ್ರೀ ರಾಮಕೃಷ್ಣ ಪಿ.ಯು ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಿಗೆ ಮನವಿ ನೀಡಲಾಗಿದೆ. ವಿದ್ಯಾರ್ಥಿಗಳು ಪ್ಲಾಸ್ಟಿಕ್ ಧ್ವಜ ಮತ್ತು ತ್ರಿವರ್ಣ ಮಾಸ್ಕ್ ಖರೀದಿಸದಂತೆ ಜಾಗೃತಿ ಮೂಡಿಸಲು, ಶಾಲಾ-ಕಾಲೇಜುಗಳಲ್ಲಿ ಉಪನ್ಯಾಸ, ಸ್ಪರ್ಧೆಗಳು, ಕರಪತ್ರ ವಿತರಣೆ ಹಾಗೂ ರಸ್ತೆಯಲ್ಲಿ ಬಿದ್ದಿರುವ ಧ್ವಜಗಳನ್ನು ಗೌರವಯುತವಾಗಿ ಸಂಗ್ರಹಿಸುವ ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡುವಂತೆ ಕೋರಲಾಗಿದ್ದು, ಈ ರಾಷ್ಟ್ರಾಭಿಮಾನಿ ಜಾಗೃತಿ ಅಭಿಯಾನದಲ್ಲಿ ಸಾರ್ವಜನಿಕರು ಹಾಗೂ ಮಾಧ್ಯಮಗಳು ಸಕ್ರಿಯವಾಗಿ ಪಾಲ್ಗೊಳ್ಳಲು ವಿನಂತಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









