ಮಂಗಳೂರು : ಮಂಗಳೂರಿನ ಕೆನರಾ ಕಾಲೇಜಿನ (ಸ್ವಾಯತ್ತ) ಸ್ಟೂಡೆಂಟ್ ವೆಲ್ಫೇರ್ ಕೌನ್ಸಿಲ್ ಹಾಗೂ ಲಲಿತ ಕಲಾ ಸಂಘದ ಜಂಟಿ ಆಶ್ರಯದಲ್ಲಿ ನಗರದ ಟಿ.ವಿ. ರಾಮನ್ ಪೈ ಕನ್ವೆನ್ಷನ್ ಸೆಂಟರ್ನಲ್ಲಿ ಇತ್ತೀಚೆಗೆ ವಿದ್ಯಾರ್ಥಿ ಕ್ಷೇಮಪಾಲನಾ ಮಂಡಳಿಯ ಉದ್ಘಾಟನೆ ಹಾಗೂ ‘ಆವಿಷ್ಕಾರ್–2026: ಪ್ರತಿಭಾ ಅನಾವರಣ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರದ್ಧಾಸಕ್ತಿಗಳಿಂದ ಆಯೋಜಿಸಲಾಗಿತ್ತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ನ ಪ್ರಾಂಶುಪಾಲರಾದ ಡಾ. ಮಾಲಿನಿ ಎನ್. ಹೆಬ್ಬಾರ್, ವಿದ್ಯಾರ್ಥಿ ದೆಸೆಯಲ್ಲಿ ಸಿಗುವ ಅಪರೂಪದ ಅವಕಾಶಗಳನ್ನು ಗುರುತಿಸಿ, ವಿವೇಚನೆಯಿಂದ ಸೂಕ್ತ ಆಯ್ಕೆಗಳನ್ನು ಮಾಡಿಕೊಂಡು ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕು ಎಂದರು. ನಮ್ಮಲ್ಲಿ ಉಂಟಾಗುವ ಧನಾತ್ಮಕ ಚಿಂತನೆಗಳು ಕುಟುಂಬ ಮತ್ತು ಸಮಾಜದ ಪ್ರಗತಿಗೆ ಮುನ್ನುಡಿ ಬರೆಯುವುದರಿಂದ, ಸಮಾಜ ನಿರ್ಮಾಣದಲ್ಲಿ ಯುವಜನತೆ ಸಕ್ರಿಯವಾಗಿ ಭಾಗಿಯಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಗೌರವ ಅತಿಥಿಯಾಗಿ ಆಗಮಿಸಿದ್ದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರಂಗಭೂಮಿ ನಟಿ ರೂಪಶ್ರೀ ವರ್ಕಾಡಿ ಅವರು, ಕಷ್ಟಗಳು ಮತ್ತು ಸವಾಲುಗಳು ಪ್ರತಿಭೆಯನ್ನು ಎಂದಿಗೂ ತುಳಿಯಲಾರವು, ಬದಲಿಗೆ ಅವು ಯಶಸ್ಸಿಗೆ ದಾರಿದೀಪವಾಗುತ್ತವೆ ಎಂದು ತಮ್ಮ ರಂಗಪಯಣದ ಅನುಭವಗಳನ್ನು ಹಂಚಿಕೊಂಡರು. ಕಲೆಯು ಕೇವಲ ಮನರಂಜನೆಗೆ ಸೀಮಿತವಾಗದೆ ವ್ಯಕ್ತಿತ್ವ ವಿಕಸನ, ಆತ್ಮವಿಶ್ವಾಸ ಮತ್ತು ಆಲೋಚನಾ ಶಕ್ತಿಯನ್ನು ಹೆಚ್ಚಿಸುವ ಪ್ರಬಲ ಮಾಧ್ಯಮವಾಗಿದೆ ಎಂದ ಅವರು, ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಪ್ರವೀಣತೆಯ ಮಟ್ಟಕ್ಕೆ ಕೌಶಲ್ಯವಾಗಿ ಬೆಳೆಸಿಕೊಳ್ಳಬೇಕು ಹಾಗೂ ಯಾವುದೇ ಕಾರಣಕ್ಕೂ ಶಿಕ್ಷಣಕ್ಕೆ ನೀಡುವ ಆದ್ಯತೆಯನ್ನು ಕಡಿಮೆ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆನರಾ ಕಾಲೇಜಿನ ಸಂಚಾಲಕ ಸಿಎ ಎಂ. ಜಗನ್ನಾಥ ಕಾಮತ್ ಅವರು, ಯಶಸ್ಸಿಗೆ ಬರಿ ಪ್ರತಿಭೆಯಷ್ಟೇ ಸಾಲದು, ಶಿಸ್ತು, ಕಠಿಣ ಪರಿಶ್ರಮ ಮತ್ತು ವಿವೇಚನಾಶೀಲತೆ ಅತ್ಯಗತ್ಯ ಎಂದರು. ವಿದ್ಯಾರ್ಥಿಗಳು ರಾಜಕೀಯ ಕುತಂತ್ರಗಳು ಮತ್ತು ತಪ್ಪು ಪ್ರಭಾವಗಳಿಗೆ ಒಳಗಾಗದೆ ಸರಿ-ತಪ್ಪುಗಳನ್ನು ವಿವೇಚಿಸಿ ಸವಾಲುಗಳನ್ನು ಧೈರ್ಯವಾಗಿ ಎದುರಿಸುವ ಜವಾಬ್ದಾರಿಯುತ ನಾಯಕರಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಲತಾ ವಿ. ಮಾತನಾಡಿ, ಶೈಕ್ಷಣಿಕ ಪ್ರಗತಿಯೊಂದಿಗೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಸೃಜನಶೀಲ ಪ್ರತಿಭೆಗಳನ್ನು ಹೊರತರಲು ‘ಆವಿಷ್ಕಾರ್’ ನಂತಹ ವೇದಿಕೆಗಳು ಸಹಕಾರಿ ಎಂದು ತಿಳಿಸಿದರು.
ಸಮಾರಂಭದಲ್ಲಿ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಕ್ಷೇಮಪಾಲನಾ ಮಂಡಳಿಯ ಪದಾಧಿಕಾರಿಗಳಿಗೆ ಸಂಯೋಜಕ ಡಾ. ಗಣೇಶ್ ಶೆಟ್ಟಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಕಾಲೇಜಿನ ವ್ಯವಸ್ಥಾಪಕರಾದ ಶಿವಾನಂದ ಶೆಣೈ, ಆಡಳಿತಾಧಿಕಾರಿ ಡಾ. ದೀಪ್ತಿ ನಾಯಕ್, ಸಹ ಸಂಯೋಜಕರಾದ ರೂಪ ಶ್ರೀ, ಡಾ. ಸವಿತಾ, ಲಲಿತ ಕಲಾ ಸಂಘದ ಸಂಯೋಜಕಿ ಉಷಾ ನಾಯಕ್, ವಿದ್ಯಾರ್ಥಿ ನಾಯಕರಾದ ಸಾದ್ ಮೊಹಮ್ಮದ್, ದೇವಿಕಾ, ದಿಯಾ ರಾವ್, ಸೋಮ್ ಪ್ರಸಾದ್ ಹಾಗೂ ಅನುಷ್ಕಾ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಿನಾಲ್ ಬಿನು ಕಾರ್ಯಕ್ರಮ ನಿರೂಪಿಸಿದರು, ಸಾದ್ ಮೊಹಮ್ಮದ್ ಸ್ವಾಗತ ಕೋರಿದರು, ಉಷಾ ನಾಯಕ್ ಹಾಗೂ ರೂಪಶ್ರೀ ಅತಿಥಿಗಳನ್ನು ಪರಿಚಯಿಸಿದರು ಮತ್ತು ಅನುಷ್ಕಾ ಶೆಟ್ಟಿ ವಂದಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









