ಮಂಗಳೂರು : ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯ ಗುಂಡಿನ ದಾಳಿಗೆ ಮೂವರು ಅಮಾಯಕರು ಮೃತಪಟ್ಟಿರುವ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ, ಪ್ರಕರಣದ ಸತ್ಯಾಸತ್ಯತೆ ಹೊರಬರಲು ವಿಶೇಷ ತನಿಖಾ ತಂಡ (SIT) ರಚಿಸಿ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಅರಣ್ಯ ಪ್ರದೇಶದಲ್ಲಿ ದನಕರು ಹಾಗೂ ಮೇಕೆಗಳನ್ನು ಹುಡುಕಲು ತೆರಳಿದ್ದವರು ವಿಶ್ರಾಂತಿಗಾಗಿ ಮಲಗಿದ್ದ ಸಂದರ್ಭದಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಲಾಗಿದೆ ಎಂಬ ಸ್ಥಳೀಯರ ಹೇಳಿಕೆಯನ್ನು ಉಲ್ಲೇಖಿಸಿದ ಐವನ್ ಡಿ’ಸೋಜಾ, ಮೃತರು ಭೇಟೆಯಾಡಲು ತೆರಳಿದ್ದರು ಎಂಬ ಆರೋಪವನ್ನು ಪ್ರಶ್ನಿಸಿದರು. ಯಾವುದೇ ನಿರಪರಾಧಿಗಳ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳ ವಿರುದ್ಧ ಕಾನೂನುಬದ್ಧ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಘಟನೆಯ ಸಂಪೂರ್ಣ ಹಿನ್ನೆಲೆ, ಗುಂಡಿನ ದಾಳಿಗೆ ಕಾರಣವಾದ ಪರಿಸ್ಥಿತಿ ಹಾಗೂ ಅಧಿಕಾರಿಗಳ ಪಾತ್ರದ ಬಗ್ಗೆ ಯಾವುದೇ ಅನುಮಾನಗಳಿಗೆ ಅವಕಾಶವಿಲ್ಲದಂತೆ ತನಿಖೆ ನಡೆಯಬೇಕು ಎಂದು ಅವರು ಹೇಳಿದರು. ಸರ್ಕಾರದ ಸಾಮಾನ್ಯ ತನಿಖೆಗಿಂತಲೂ ಸ್ವತಂತ್ರ ಹಾಗೂ ವಿಶೇಷ ತನಿಖಾ ತಂಡದ ಮೂಲಕ ವಿಚಾರಣೆ ನಡೆಸಿದರೆ ಮಾತ್ರ ಘಟನೆಯ ನೈಜ ಸಂಗತಿಗಳು ಬೆಳಕಿಗೆ ಬರಲಿವೆ ಎಂಬ ಅಭಿಪ್ರಾಯವನ್ನು ಮುಖ್ಯಮಂತ್ರಿ ಅವರ ಮುಂದೆ ವ್ಯಕ್ತಪಡಿಸಿದರು.
ಗುಂಡಿನ ದಾಳಿಯಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೂ ಕನಿಷ್ಠ ₹1 ಕೋಟಿ ಪರಿಹಾರ ನೀಡಬೇಕು ಎಂದು ಐವನ್ ಡಿ’ಸೋಜಾ ಆಗ್ರಹಿಸಿದರು. ಜೊತೆಗೆ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಅಗತ್ಯವಿರುವ ಎಲ್ಲ ರೀತಿಯ ನೆರವು ಕಲ್ಪಿಸಬೇಕು ಹಾಗೂ ಈ ಹಿಂದೆ ಇಂತಹ ಪ್ರಕರಣಗಳಲ್ಲಿ ನೀಡಿರುವ ಪರಿಹಾರ ಮತ್ತು ಪುನರ್ವಸತಿ ಸೌಲಭ್ಯಗಳನ್ನು ಈ ಕುಟುಂಬಗಳಿಗೂ ಒದಗಿಸಬೇಕು ಎಂದು ಮನವಿ ಮಾಡಿದರು.
ಮೃತರ ಕುಟುಂಬದ ಮಕ್ಕಳಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ, ಚಿಕ್ಕ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಅವರು ಒತ್ತಾಯಿಸಿದರು. ಕುಟುಂಬಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶಾಶ್ವತ ಆರ್ಥಿಕ ನೆರವು, ಶಿಕ್ಷಣ ಮತ್ತು ಉದ್ಯೋಗದಂತಹ ಪುನರ್ವಸತಿ ಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕು ಎಂದು ಮನವಿ ಮಾಡಿದರು.
ಈ ಸಂಬಂಧ ಐವನ್ ಡಿ’ಸೋಜಾ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಬಳಿಕ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರನ್ನೂ ಭೇಟಿ ಮಾಡಿ ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.
ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು, ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಬೇಕು ಹಾಗೂ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ನಿಯೋಗ ಒತ್ತಾಯಿಸಿತು. ಕುಟುಂಬಗಳ ನೋವು ಮತ್ತು ಅಸಹಾಯಕತೆಯನ್ನು ಪರಿಗಣಿಸಿ ಸರ್ಕಾರವು ತಕ್ಷಣ ಸ್ಪಂದಿಸಿ ಅವರಿಗೆ ಅಗತ್ಯ ಭದ್ರತೆ ಹಾಗೂ ಶಾಶ್ವತ ನೆರವು ಒದಗಿಸಬೇಕೆಂದು ಮನವಿ ಮಾಡಲಾಯಿತು.
ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ ಅವರು ಪ್ರಕರಣದ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









